ಭೂಪಾಲ್: ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ ಪೈಲಟ್ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ರೇವಾದಲ್ಲಿ ಅವಘಡ ಸಂಭವಿಸಿದೆ.
ವಿಮಾನ ಅಪಘಾತಕ್ಕೆ ತುತ್ತಾಗುವ ಸಂದರ್ಭದಲ್ಲಿ ಅದರಲ್ಲಿದ್ದ ಪೈಲಟ್, ತರಬೇತಿ ನಿರತರಾಗಿದ್ದರು. ಮತ್ತೋರ್ವ ಪೈಲಟ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಭೋಪಾಲ್‌ನಿಂದ 400 ಕಿಮೀ ದೂರದಲ್ಲಿರುವ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಪತನಗೊಂಡ ನಂತರ ತರಬೇತಿ ವಿಮಾನದ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ 11.30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ವಿಮಾನದಲ್ಲಿದ್ದ ಟ್ರೈನಿ ಪೈಲಟ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತರಬೇತಿಯಲ್ಲಿದ್ದಾಗ ದೇವಾಲಯದ ಗುಮ್ಮಟ ಮತ್ತು ಮರಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನವು ಚೋರ್ಹಟ್ಟಾ ಏರ್‌ಸ್ಟ್ರಿಪ್‌ನಿಂದ ಮೂರು ಕಿಮೀ ದೂರದಲ್ಲಿ ಪತನಗೊಂಡಿದೆ ಎಂದು ಚೋರ್ಹಟ್ಟಾ ಪೊಲೀಸ್ ಠಾಣೆಯ ಉಸ್ತುವಾರಿ ಜೆ ಪಿ ಪಟೇಲ್ ಹೇಳಿದ್ದಾರೆ.
ಅಪಘಾತದಲ್ಲಿ ಕ್ಯಾಪ್ಟನ್ ವಿಶಾಲ್ ಯಾದವ್ (30) ಸಾವನ್ನಪ್ಪಿದ್ದು, ಟ್ರೈನಿ ಪೈಲಟ್ ಅನ್ಶುಲ್ ಯಾದವ್ ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರೇವಾ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನನ್ವನೀತ್ ಭಾಸಿನ್ ಸ್ಥಳದಲ್ಲಿದ್ದು, ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.