ಮಧ್ಯಪ್ರದೇಶ: ಬಾಲಕಿಯರ ಹಾಸ್ಟೆಲ್‌ನಲ್ಲಿ ತಪಾಸಣೆ ವೇಳೆ ಲೈಂಗಿಕ ಕಿರುಕುಳ ನೀಡಿದ ಜಿಲ್ಲಾಧಿಕಾರಿ ಬಂಧನ

ಭೋಪಾಲ್: ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಸರ್ಕಾರಿ ಬುಡಕಟ್ಟು ಬಾಲಕಿಯರ ವಸತಿ ನಿಲಯದಲ್ಲಿ ತಪಾಸಣೆ ವೇಳೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಿ, ಬಂಧಿಸಲಾಗಿದೆ.

ಬಂಧಿತ ಡೆಪ್ಯುಟಿ ಕಲೆಕ್ಟರ್ ಸುನಿಲ್ ಕುಮಾರ್ ಝಾ(58) ಅವರ ವಿರುದ್ಧ ಮಂಗಳವಾರ ಬೆಳಗ್ಗೆ ಪೋಕ್ಸೊ ಕಾಯಿದೆ ಮತ್ತು SC/ST ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ.

ಝಬುವಾ ಪೊಲೀಸ್ ಮೂಲಗಳ ಪ್ರಕಾರ, ಭಿಲ್ ಬುಡಕಟ್ಟು ಪ್ರಾಬಲ್ಯವಿರುವ ಝಬೌ ಜಿಲ್ಲೆಯಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಝಾ ಅವರು ಭಾನುವಾರ ಬುಡಕಟ್ಟು ಬಾಲಕಿಯರ ಸರ್ಕಾರಿ ಹಾಸ್ಟೆಲ್ ತಪಾಸಣೆ ನಡೆಸಿದ್ದರು.

ತಪಾಸಣೆಯ ಸಮಯದಲ್ಲಿ, ಝಾ ಅವರು ಕೆಲವು ಹುಡುಗಿಯರನ್ನು ಅನುಚಿತವಾಗಿ ಸ್ಪರ್ಶಿಸಿದರು ಮತ್ತು ಅವರಿಗೆ ಅತ್ಯಂತ ಆಕ್ಷೇಪಾರ್ಹ ಮತ್ತು ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ ಜಿಲ್ಲಾಧಿಕಾರಿಯ ಕೆಟ್ಟ ಸ್ಪರ್ಶ ಮತ್ತು ಆಕ್ಷೇಪಾರ್ಹ ಪ್ರಶ್ನೆಗಳ ಬಗ್ಗೆ ಬಾಲಕಿಯರು ಹಾಸ್ಟೆಲ್ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಹಾಸ್ಟೆಲ್ ಅಧೀಕ್ಷಕರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಡೆಪ್ಯುಟಿ ಕಲೆಕ್ಟರ್ ವಿರುದ್ಧ ಝಬುವಾ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ಕೆಲವು ಗಂಟೆಗಳ ನಂತರ ಝಬುವಾ ಅವರನ್ನು ಬಂಧಿಸಿ, ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Latest Indian news

Popular Stories