ಮಹಿಳಾ ಟಿ20 ವಿಶ್ವಕಪ್: ವಿಂಡೀಸ್ ವಿರುದ್ಧ ಭಾರತ ತಂಡಕ್ಕೆ 6 ವಿಕೆಟ್ ಗಳ ಭರ್ಜರಿ ಜಯ

ಕೇಪ್ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮಹಿಳೆಯರ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಈ ಹಿಂದೆ ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಶುಭಾರಂಭ ಮಾಡಿದ್ದ ಭಾರತ ತಂಡ ಇದೀಗ ತನ್ನ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ ಇಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಸ್ಟೆಫಾನಿ ಟೈಲರ್ 42, ಶೆಮೈನ್ ಕ್ಯಾಂಪ್‌ಬೆಲ್ 30, ಚೆಡಿಯನ್ ನೇಷನ್ 21 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ವಿಂಡೀಸ್ ನೀಡಿದ 119ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 18.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಭಾರತದ ಪರ ರಿಚಾ ಘೋಷ್ ಔಟಾಗದೆ 44, ಹರ್ಮನ್‌ಪ್ರೀತ್ ಕೌರ್ 33, ಶಫಾಲಿ ವರ್ಮಾ 28 ರನ್ ಗಳಿಸಿ ಗೆಲುವಿನ ರೂವಾರಿಗಳಾದರು.

ವೆಸ್ಟ್‌ ಇಂಡೀಸ್ ಪರ ಕರಿಷ್ಮಾ ರಾಮ್‌ಹರಾಕ್ 2, ಹೇಲಿ ಮ್ಯಾಥ್ಯೂಸ್, ಚಿನೆಲ್ಲೆ ಹೆನ್ರಿ ತಲಾ ಒಂದೊಂದು ವಿಕೆಟ್ ಪಡೆದರು. 

ಭಾರತ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಫೆ.12ರಂದು (ಭಾನುವಾರ) ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿತ್ತು.

Latest Indian news

Popular Stories