ಮಾ. 1ರಿಂದ ಮುಷ್ಕರ: ಸರಕಾರಿ ನೌಕರರ ಎಚ್ಚರಿಕೆ

ಬೆಂಗಳೂರು: ಹಳೆಯ ಪಿಂಚಣಿ ಯೋಜನೆ ಜಾರಿ ಸಹಿತ 2 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರಿ ನೌಕರರ ಸಂಘ ಸರಕಾರಕ್ಕೆ ಒಂದು ವಾರದ ಗಡುವು ನೀಡಿದೆ.

ಫೆ. 28ರ ಒಳಗೆ ಬೇಡಿಕೆ ಈಡೇರಿಸದೆ ಇದ್ದರೆ ಮಾ. 1ರಿಂದ ಸರಕಾರಿ ನೌಕರರು ರಾಜ್ಯ ವ್ಯಾಪಿಯಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಎಚ್ಚರಿಸಿದ್ದಾರೆ.

ಕಬ್ಬನ್‌ ಪಾರ್ಕ್‌ನ ಸರಕಾರಿ ನೌಕರರ ಸಭಾಂಗಣದಲ್ಲಿ ಮಂಗಳವಾರ ನಡೆದ ಸರಕಾರಿ ನೌಕರರ ಸಂಘ ಹಾಗೂ ವೃಂದದ ಸಂಘ ಗಳ ಅಧ್ಯಕ್ಷರ-ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರ 7ನೇ ವೇತನ ಆಯೋಗದಿಂದ ಮಧ್ಯಾಂತರ ವರದಿ ಪಡೆದು ಚುನಾವಣ ನೀತಿ ಸಂಹಿತೆ ಜಾರಿಗೂ ಮುನ್ನ ಶೇ. 40ರಷ್ಟು ಫಿಟ್ಮೆಂಟ್ ಸೌಲಭ್ಯ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಪಂಜಾಬ್‌, ರಾಜಸ್ಥಾನ, ಛತ್ತೀಸ್‌ಗಢ, ಝಾರ್ಖಂಡ್‌, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ನೌಕರರ ಹಿತದೃಷ್ಟಿಯಿಂದ ನೂತನ ಪಿಂಚಣಿ ಯೋಜನೆ ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ನೌಕರರ ಬೇಡಿಕೆ ಈಡೇರಿಸುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ.

ಹೋರಾಟದ ವೇಳೆ ಸರಕಾರ ನೌಕರರ ವಿರುದ್ಧ ಎಸ್ಮಾ ಜಾರಿಗೆ ಮುಂದಾಗಬಹುದು. ಇಲ್ಲವೇ ಕೆಲವರಿಗೆ ಬೆದರಿಸಲು ಮುಂದಾಗಬಹುದು. ಆದರೆ ಇದ್ಯಾವುದಕ್ಕೂ ಅಂಜದೇ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಸಂಘದ ಮಾಜಿ ಅಧ್ಯಕ್ಷ ಭೈರಪ್ಪ ಮಾತನಾಡಿ, ರಾಜ್ಯ ನಿವೃತ್ತ ಸರಕಾರಿ ನೌಕರರು ಕೂಡ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ಹಿಂದೆ ಸರಿಯಬಾರದು. ಒಂದು ವೇಳೆ ಸರಕಾರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

Latest Indian news

Popular Stories