ಬೆಂಗಳೂರು: ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿಗಳ ಸಮಸ್ಯೆ ಶಮನವಾಗಿದೆಯೇ? ಖಂಡಿತವಾಗಿಯೂ ಇಲ್ಲ. ನಾವು ನಿರಾಶೆಗೊಂಡಿದ್ದೇವೆ. ಮೀಸಲಾತಿ ವಿಚಾರದಲ್ಲಿ ಏನನ್ನೂ ತಿಳಿಯದೆ ಗೊಂದಲದಲ್ಲಿದ್ದೇವೆಂದು ಎಂದು ಕೂಡಲಸಂಗಮ ಮಠದ ಪಂಚಮಸಾಲಿ ಮಠಾಧೀಶ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ.
ಸಮುದಾಯದ ಬೇಡಿಕೆಯಂತೆ 2ಎ ಬದಲಿಗೆ 2ಡಿ ವರ್ಗದಡಿ ಕೋಟಾ ನೀಡಲು ಸರ್ಕಾರ ಇತ್ತೀಚೆಗೆ ನಿರ್ಧಾರ ಪ್ರಕಟಿಸಿತ್ತು. ಈ ನಿರ್ಧಾರ ನಮಗೆ ಅರ್ಥವಾಗದೆ ಗೊಂದರಲ್ಲಿದ್ದೇವೆ. ಹೀಗಾಗಿ ಸಮುದಾಯದ ಮುಖಂಡರು ಜನವರಿ 5 ರಂದು ಸಭೆ ಸೇರಲಿದ್ದು, ಸಮುದಾಯಕ್ಕೆ ಮೀಸಲಾತಿಯಲ್ಲಿ ನಿಜವಾದ ಲಾಭವನ್ನು ವಿಶ್ಲೇಷಿಸುತ್ತೇವೆಂದು ಹೇಳಿದ್ದಾರೆ.
ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಂಘದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಪಂಚಮಸಾಲಿಗಳ ಪಾಲಿಗೆ ಇದು ನಿಜವಾದ ಹೋರಾಟವಾಗಿದೆ. ಕಳೆದ ಎರಡು ವರ್ಷಗಳಿಂದ ಮನೆ, ಮಠ ತೊರೆದು ಧರಣಿ ನಡೆಸುತ್ತಿದ್ದಾರೆ. ಈಗ ಮೀಸಲಾತಿಯಲ್ಲಿ ಅವರ ಪಾಲು ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ನಾವು ಕೇಳಿದಷ್ಟು ಸರ್ಕಾರ ಕೊಟ್ಟಿಲ್ಲ. ಸರ್ಕಾರದ ಘೋಷಣೆಯನ್ನು ಸ್ವಾಗತಿಸುವ ರುಪಿಕು ನಾನು ಇಲ್ಲಿಯವರೆಗೆ ಏನನ್ನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಸೋಮವಾರವೇ ಸಭೆ ಸೇರಲು ನಿರ್ಧರಿಸಿದ್ದೆವು. ಆದರೆ, ಬಿಜಾಪುರ ಸಿದ್ದಶ್ರೀ ಮಠದ ಹಿರಿಯ ಸ್ವಾಮೀಜಿಯೊಬ್ಬರು ಅಸ್ವಸ್ಥರಾಗಿರುವ ಕಾರಣ ಜನವರಿ 5 ರಂದು ನಡೆಸಲು ನಿರ್ಧರಿಸಿದ್ದೇವೆ. ಬಸನಗೌಡ ಪಾಟೀಲ್ ಯತ್ನಾಳ್, ಎ.ವಿ.ಪಾಟೀಲ್ ಹಾಗೂ ಕಾನೂನು ತಜ್ಞರು, ದಿನೇಶ್ ಪಾಟೀಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಮಾತನಾಡಿ, ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಗೆ ಪಂಚಮಸಾಲಿಗಳು ಸೇರಿ ಈ ಮೀಸಲಾತಿಯನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
”ಹಿಂದುಳಿದ ವರ್ಗಗಳ ಆಯೋಗವು ಅಧ್ಯಯನ ನಡೆಸಿ ಮಧ್ಯಂತರ ವರದಿ ಸಲ್ಲಿಸಿದ ನಂತರ ನಮಗೆ ಮೀಸಲಾತಿ ನೀಡಲಾಗಿದೆ. ಆದರೆ ಯಾವುದೇ ಅಧ್ಯಯನ ನಡೆಸದೆ, ವರದಿ ನೀಡದೆ ಒಕ್ಕಲಿಗರಿಗೆ 2ಸಿ ಮೀಸಲಾತಿ ನೀಡಿದ್ದು ಹೇಗೆ? ವರದಿ ಇರುವುದೇ ಆದರೆ, ಅದು ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.