ನವದೆಹಲಿ: ಮುಂದಿನ ಎರಡು ದಿನಗಳ ಕಾಲ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈ ಮೂರು ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಮಾನ್ಸೂನ್ ಇಡೀ ಈಶಾನ್ಯ ಪ್ರದೇಶವನ್ನು ಆವರಿಸಿರುವುದರಿಂದ ಈ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ವರ್ಷದ ಮೇ ತಿಂಗಳಿನಿಂದ ಮೂರು ರಾಜ್ಯಗಳಲ್ಲಿ ಮಳೆರಾಯ ಕನಿಷ್ಠ 43 ಜನರನ್ನು ಬಲಿ ತೆಗೆದುಕೊಂಡಿದೆ. ಅಸ್ಸಾಂನಲ್ಲಿ ಪ್ರವಾಹದಿಂದ 27 ಜನರು ಮೃತಪಟ್ಟಿದ್ದಾರೆ.
ಮೇಘಾಲಯದಲ್ಲಿ, ಪ್ರವಾಹಕ್ಕೆ ಕಾರಣವಾದ ನಿರಂತರ ಮಳೆಯ ನಡುವೆ ಸೇತುವೆಯೊಂದು ಕೊಚ್ಚಿಹೋಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗುರುವಾರ ಮುಂಜಾನೆ ಮೇಘಾಲಯದ ಗಾರೋ ಹಿಲ್ಸ್ ಪ್ರದೇಶದಲ್ಲಿ ಸಂಭವಿಸಿದ ಎರಡು ವಿಭಿನ್ನ ಭೂಕುಸಿತಗಳಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.