ಮುತಾಲಿಕ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಹೇಳಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ – ಶ್ರೀರಾಮ ಸೇನೆ ಮುಖಂಡ ಮಹೇಶ್ ಕುಮಾರ್ ಕೆ

ಉಡುಪಿ: ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಮರು ಚಿಂತನೆ ಮಾಡಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಮತ್ತು ಕರಾವಳಿ ಮುಖಂಡರು ಅಭಿಪ್ರಾಯಪಟ್ಟರು.
ರವಿವಾರ ಶ್ರೀರಾಮಸೇನೆ ಕಾರ್ಯಕರ್ತರ ಬೈಠಕ್‌ನಲ್ಲಿ ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ. ಮಾತನಾಡಿ, ಮುತಾಲಿಕ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಹೇಳಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಅಲ್ಲಿನ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಮುತಾಲಿಕ್ ಅವರಿಗೆ ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸಿದ್ದಾರೆ ಎಂದರು.
ಶ್ರೀರಾಮ ಸೇನೆ ಮುಖಂಡ ಮೋಹನ್ ಭಟ್ ಮಾತನಾಡಿ, ಮುತಾಲಿಕ್ ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡರೆ ಉತ್ತಮ. ಮುಂಚೆಯೇ ನಾವು ಮುತಾಲಿಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಸಿ.ಟಿ. ರವಿ ಮತ್ತು ಸಂಘ ಪರಿವಾರದ ಮುಖಂಡರ ಜತೆಗೆ ಮಾತುಕತೆ ನಡೆಸಿದಾಗ ಜಮಖಂಡಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದರು.
ಚಂದ್ರಕಾಂತ್ ಶೆಟ್ಟಿ, ಸಂದೀಪ್ ಮೂಡುಬೆಟ್ಟು, ಕೀರ್ತಿರಾಜ್, ಶ್ರೀನಿವಾಸ್ ರಾವ್, ಶಾರದಮ್ಮ, ಪ್ರಶಾಂತ್ ಬಂಗೇರ ಉಪಸ್ಥಿತರಿದ್ದರು.