ವರದಿ: ಸಮೀವುಲ್ಲಾ ಉಸ್ತಾದ
ವಿಜಯಪುರ : ಮುದ್ದೇಬಿಹಾಳ ಜನತೆ ದೇಶಮುಖ, ನಾಡಗೌಡ ಪರಿವಾರಕ್ಕೆ ಒಲವು ತೋರಿ ಅನೇಕ ಬಾರಿ ಗೆಲುವಿನ ನಗೆ ನೀಡಿದ್ದಾರೆ. ಜೊತೆಗೆ ಇಬ್ಬರಿಗೆ ಹ್ಯಾಟ್ರಿಕ್ ಗೆಲುವಿನ ಯೋಗ, ಮಹಿಳಾ ಪ್ರಾತಿನಿಧ್ಯ ಹೀಗೆ ಹಲವಾರು ರೀತಿಯ ದಾಖಲೆಯನ್ನು ಮುದ್ದೇಬಿಹಾಳ ಮತ ಕ್ಷೇತ್ರ ತನ್ನದಾಗಿಸಿಕೊಂಡಿದೆ.
1957 ರಿಂದ ರಚನೆಯಾದ ಮುದ್ದೇಬಿಹಾಳದಲ್ಲಿ ನಾಡಗೌಡ, ದೇಶಮುಖ ಪರಿವಾರದ ನಾಯಕರಿಗೆ ಪ್ರಾತಿನಿಧ್ಯವೇ ಬಾಹುಳ್ಯ ಅಧಿಕವಾಗಿದ್ದು ವಿಶೇಷ.
1978 ರಿಂದಲೇ 2013 ರವರೆಗೂ ನಡೆದ ಎಲ್ಲ ಚುನಾವಣೆಯಲ್ಲಿ ನಾಡಗೌಡ, ದೇಶಮುಖ ಪರಿವಾರದವರೇ ಆಯ್ಕೆಯಾಗುತ್ತಾ ಬಂದಿರುವುದು ಈ ಕ್ಷೇತ್ರದ ವಿಶೇಷ.
1957 ರಲ್ಲಿ ಕ್ಷೇತ್ರ ರಚನೆಯಾದಾಗಿನಿಂದ ಹಿಡಿದು ಇಲ್ಲಿಯವರೆಗೆ ಕಮಲ ಅರಳಿರಲಿಲ್ಲ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವ ದಾಖಲೆ ಮಾಡಿದ್ದು ಎ.ಎಸ್. ಪಾಟೀಲ ನಡಹಳ್ಳಿ.
ನಾಡಗೌಡ, ದೇಶಮುಖ ಪರಿವಾರದವರಿಗೆ ಮುದ್ದೇಬಿಹಾಳ ಕ್ಷೇತ್ರದ ಮತದಾರ ಆಶೀರ್ವಾದ ತೋರಿದ್ದು ಅಧಿಕ.
ಕಾಂಗ್ರೆಸ್ ಹಾಗೂ ಜನತಾದಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುದ್ದೇಬಿಹಾಳ ಜನತೆ ಆಶೀರ್ವದಿಸಿದ್ದೂ ಇದೆ. ಈ ಕ್ಷೇತ್ರವನ್ನು ಪ್ರತಿನಿಧಿಸಿದ ಜಗದೇವರಾವ ದೇಶಮುಖ ಹಾಗೂ ಸಿ.ಎಸ್. ನಾಡಗೌಡರ ಅವರಿಗೆ ಹ್ಯಾಟ್ರಿಕ್ ಗೆಲುವು ದೊರಕಿದೆ. ಆ ಮೂಲಕ ಇಬ್ಬರಿಗೆ ಹ್ಯಾಟ್ರಿಕ್ ಗೆಲುವಿನ ಯೋಗ ಕರುಣಿಸಿದ್ದು ಮುದ್ದೇಬಿಹಾಳ.
9 ಬಾರಿ ಮುದ್ದೇಬಿಹಾಳ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದು ಕಾಂಗ್ರೆಸ್, ಜೆಎನ್ಪಿ ಪಕ್ಷ ಮುದ್ದೇಬಿಹಾಳದಲ್ಲಿ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದು ಇನ್ನೊಂದು ವಿಶೇಷ. 1957 ರಲ್ಲಿ ಪ್ರಾಣೇಶ ಗುರುಭಟ್ಟ್ ಸಿದ್ಧಾಂತಿ ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುವ ಮೂಲಕ ಮುದ್ದೇಬಿಹಾಳ ಕ್ಷೇತ್ರದ ಪ್ರಥಮ ಶಾಸಕರಾಗಿ ಆಯ್ಕೆಯಾದರು.
ಈ ಹಿಂದೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ನಡಹಳ್ಳಿ ಅವರು ಕಾಂಗ್ರೆಸ್ಗೆ ಗುಡಬೈ ಹೇಳಿ ಮುದ್ದೇಬಿಹಾಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆ ಮೂಲಕ ಕಮಲವನ್ನು ಮುದ್ದೇಬಿಹಾಳದಲ್ಲಿ ಅರಳಿಸಿದರು.
ಇಬ್ಬರಿಗೆ ಹ್ಯಾಟ್ರಿಕ್ ಯೋಗ
ಮುದ್ದೇಬಿಹಾಳ ಮತಕ್ಷೇತ್ರ ಇಬ್ಬರು ನಾಯಕರಿಗೆ ಹ್ಯಾಟ್ರಿಕ್ ಯೋಗ ಕರುಣಿಸಿದೆ. ಜಗದೇವರಾವ ದೇಶಮುಖ ಹಾಗೂ ಸಿ.ಎಸ್. ನಾಡಗೌಡ ಅವರಿಗೆ ಹ್ಯಾಟ್ರಿಕ್ ಆಗಿ ಆಯ್ಕೆಯಾದ ನಾಯಕರು.
1978 ರಲ್ಲಿ ಆಯ್ಕೆಯಾದ ಜಗದೇವರಾವ ದೇಶಮುಖ ಅವರು 1983, 1985 ರ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದರು. 1999 ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದ ಸಿ.ಎಸ್. ನಾಡಗೌಡರು 2004, 2008, 2013 ಸತತ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಅನುಪಮ ದಾಖಲೆ ಬರೆದಿದ್ದಾರೆ, ಒಟ್ಟು ಐದು ಬಾರಿ ನಾಡಗೌಡರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಶಿವಶಂಕರ ಮಲ್ಲಪ್ಪ ಗುರಡ್ಡಿ ಅವರು ಸಹ ಈ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದರು.
ಮಹಿಳಾ ಪ್ರಾತಿನಿಧ್ಯ
ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಕೊಟ್ಟಿದ್ದು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ. ಮುದ್ದೇಬಿಹಾಳ, ಬಸವನ ಬಾಗೇವಾಡಿ ಕ್ಷೇತ್ರದಿಂದ ಮಾತ್ರ ಮಹಿಳೆಯರು ಆಯ್ಕೆಯಾಗಿದ್ದಾರೆ.
1994ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ವಿಮಲಾಬಾಯಿ ದೇಶಮುಖ ಅವರು ಭರ್ಜರಿ ಗೆಲುವಿನೊಂದಿಗೆ ಆಯ್ಕೆಯಾಗುವ ಮೂಲಕ ದಾಖಲೆ ಬರೆಯುವ ಜೊತೆಗೆ ಸಚಿವ ಸ್ಥಾನವನ್ನು ಅಲಂಕರಿಸಿದರು. ಆ ಮೂಲಕ ವಿಜಯಪುರ ಜಿಲ್ಲೆಯಿಂಧ ಸಚಿವ ಸ್ಥಾನ ಅಲಂಕರಿಸಿದ ಪ್ರಥಮ ಹಾಗೂ ಏಕೈಕ ಮಹಿಳೆ ಎಂಬ ಕೀರ್ತಿ ಇಂದಿಗೂ ಅವರ ಹೆಸರಿನಲ್ಲಿಯೇ ಇದೆ. ಆ ಮೂಲಕ ಮುದ್ದೇಬಿಹಾಳ ಮಹಿಳಾ ಪ್ರಾತಿನಿಧ್ಯಕ್ಕೂ ಅವಕಾಶ ಕಲ್ಪಿಸಿದೆ.
ಮುದ್ದೇಬಿಹಾಳ ಕ್ಷೇತ್ರ ಪ್ರತಿನಿಧಿಸಿದ ಶಾಸಕರು
1957 – ಪ್ರಾಣೇಶ ಗುರುಭಟ್ಟ ಸಿದ್ಧಾಂತಿ (ಕಾಂಗ್ರೆಸ್)
1962 – ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ (ಕಾಂಗ್ರೆಸ್)
1967 – ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ (ಕಾಂಗ್ರೆಸ್)
1972 – ಮಲ್ಲಪ್ಪ ಮುರಿಗೆಪ್ಪ ಸಜ್ಜನ (ಕಾಂಗ್ರೆಸ್)
1978 – ಜಗದೇವರಾಜ ದೇಶಮುಖ (ಜೆಎನ್ಪಿ)
1983 – ಜಗದೇವರಾಜ ದೇಶಮುಖ (ಜೆಎನ್ಪಿ)
1985 – ಜಗದೇವರಾಜ ದೇಶಮುಖ (ಜೆಎನ್ಪಿ)
1989 – ಸಿ.ಎಸ್. ನಾಡಗೌಡ (ಕಾಂಗ್ರೆಸ್)
1994 – ವಿಮಲಾಬಾಯಿ ದೇಶಮುಖ (ಜನತಾದಳ)
1999 – ಸಿ.ಎಸ್. ನಾಡಗೌಡ (ಕಾಂಗ್ರೆಸ್)
2004 – ಸಿ.ಎಸ್. ನಾಡಗೌಡ (ಕಾಂಗ್ರೆಸ್)
2008 – ಸಿ.ಎಸ್. ನಾಡಗೌಡ (ಕಾಂಗ್ರೆಸ್)
2013 – ಸಿ.ಎಸ್. ನಾಡಗೌಡ (ಕಾಂಗ್ರೆಸ್)
2018 – ಎ.ಎಸ್. ಪಾಟೀಲ ನಡಹಳ್ಳಿ (ಬಿಜೆಪಿ)