ಮೈಸೂರು: ಮೈಸೂರು ತಾಲೂಕು ಮೀನಾಕ್ಷಿಪುರದ ಕಾವೇರಿ ನೀರಿನಲ್ಲಿ ಮೂವರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೈಸೂರಿನ ಪಡುವರಹಳ್ಳಿ ನಿವಾಸಿ ಭರತ್, ಮಂಡ್ಯ ಜಿಲ್ಲೆ ಬಲ್ಲೇನಹಳ್ಳಿ ನಿವಾಸಿ ವರುಣ್, ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ಪ್ರವೀಣ್ ಮೃತಪಟ್ಟವರು. ಎರಡು ದಿನದ ಹಿಂದೆ ಮೃತ ಭರತ್ ಹುಟ್ಟುಹಬ್ಬ. ಈ ಕಾರಣಕ್ಕಾಗಿ ಈ ಮೂವರು ಸ್ನೇಹಿತರಾದ ಮನೋಜ್ ಹಾಗೂ ವಿಘ್ನೇಶ್ ಜತೆ ಪಾರ್ಟಿ ಮಾಡಲು ಕಾವೇರಿ ಹಿನ್ನೀರಿಗೆ ಹೋಗಿದ್ದರು.
ಇಳಿ ಸಂಜೆಯಲ್ಲಿ ಐದು ಜನರು ನೀರಿಗೆ ಇಳಿದಿದ್ದಾರೆ. ಈ ವೇಳೆ ವಿಘ್ನೇಶ್ ಮೊಬೈಲ್ ಇಟ್ಟು ಬರುವುದಾಗಿ ನೀರಿನಿಂದ ಮೇಲೆ ಬಂದಿದ್ದಾನೆ. ಆಗ ಉಳಿದ ನಾಲ್ವರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಈಜು ಬರುತ್ತಿದ್ದ ಮನೋಜ್ ಈಜಿ ದಡ ಸೇರಿದ್ದಾನೆ. ಆದ್ರೆ ಉಳಿದ ಭರತ್ ಪ್ರವೀಣ್ ವರುಣ್ ಈಜು ಬಾರದೆ ಕಾವೇರಿ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸದ್ಯ ಭರತ್ ವರುಣ್ ಪ್ರವೀಣ್ ಅವರ ಮೃತ ದೇಹಗಳನ್ನು ಕಾವೇರಿ ಹಿನ್ನೀರಿನಿಂದ ಹೊರಗೆ ತೆಗೆಯಲಾಗಿದೆ. ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.