ಮೈಸೂರು: ಟಿಪ್ಪುಸುಲ್ತಾನ್ ಬಗ್ಗೆ ಬ್ರಿಟಿಷರು ಹಾಡಿ ಹೊಗಳಿದ್ದಾರೆ. ರಾಜಮನೆತನದವರು ಟಿಪ್ಪು ಹುತಾತ್ಮರಾದ ಮೇಲೆ ಹೇಳಿರುವ ಮಾತುಗಳು ಇತಿಹಾಸದಲ್ಲಿ ದಾಖಲಾಗಿದ್ದರೂ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಟಿಪ್ಪು ಬಗ್ಗೆ ಏನು ಅರಿಯದೆ ಸುಳ್ಳು ಹೇಳುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಟಿಪ್ಪುವನ್ನ ಈ ದೇಶದ ರಾಷ್ಟ್ರಪತಿಗಳು ಸಹ ಹಾಡಿ ಹೊಗಳಿದ್ದಾರೆ. ಬ್ರಿಟಿಷರು ಕೂಡ ಸುಲ್ತಾನರಿಗೆ ಗೌರವ ನೀಡಿದ್ದಾರೆ. ಪದೇ ಪದೇ ಟಿಪ್ಪು ಬಗ್ಗೆ ಲಘುವಾದ ಹೇಳಿಕೆ ನೀಡಬಾರದು ಅಂತ ಹೇಳಿದ್ದಾರೆ. ಸಂಸದ ಪ್ರತಾಪ್ ಸಿಂಹ ಅಶಾಂತಿ ಮೂಡಿಸುವ ಹೇಳಿಕೆ ನೀಡ್ತಿದ್ದಾರೆ. ಪ್ರತಾಪ್ ಸಿಂಹ ಶತ್ರುಗಳು ಮನೆಗೆ ಬಂದ್ರು ದೇವೋಭವ ಅನ್ನಬೇಕು. ವೋಟಿಗಾಗಿ ಚಿಲ್ಲರೆ ಮಾತಾಡೋದನ್ನ ನಿಲ್ಲಿಸು. ಏನೇನೋ ಮಾತನಾಡುವ ನಿನಗೆ ನಾಚಿಕೆ ಆಗಬೇಕು ಅಂತ ಕಿಡಿಕಾರಿದ್ದಾರೆ.
ಗುಂಬಜ್ ರೀತಿ ಇರೋ ಬಸ್ ಸ್ಟ್ಯಾಂಡ್ ಒಡೆಯಬೇಕು ಅಂತಾ ಹೇಳಿದ್ದೀಯಲ್ಲ. ಮೈಸೂರು ಪ್ಯಾಲೇಸ್ನಲ್ಲಿ ಇರುವುದು ಗುಂಬಜ್ ರೀತಿಯ ಕಟ್ಟಡವೇ. ಅದನ್ನ ಹೊಡೆಯುವುದಕ್ಕೆ ಸಾಧ್ಯನಾ..? ಅಯ್ಯೋ ಹುಚ್ಚು ಮುಂಡೆದೇ. ಸತ್ತಿರುವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ? ನಿಂಗೆ ಮಾನ ಮರ್ಯಾದೆ ಇಲ್ವಾ ಅಂತ ಕೆಂಡ ಕಾರಿದ್ರು.
ನಂಜನಗೂಡು, ಶೃಂಗೇರಿಯಲ್ಲಿ ಟಿಪ್ಪು ಸುಲ್ತಾನ್ ನೀಡಿರುವ ವಜ್ರ, ಆಯುಧಗಳಿಗೆ ಪೂಜೆ ಮಾಡಿದ ಮೇಲೆ ಮುಂದಿನ ಕೆಲಸ ಕಾರ್ಯಗಳು ನಡೆಯಲಿವೆ. ಈಗಲೂ ನಂಜನಗೂಡು, ಶ್ರೀರಂಗಪಟ್ಟಣ ದೇವಸ್ಥಾನದಲ್ಲಿ ಟಿಪ್ಪು ಕೊಟ್ಟಿರುವ ವಜ್ರಕ್ಕೆ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ ಎಂಬುದನ್ನು ಅರಿಯಬೇಕು ಎಂದು ಕಿಡಿಕಾರಿದರು.