ವಿಜಯಪುರ: ಪ್ರಧಾನಿ ನಾ ಖಾವುಂಗಾ ನಾ ಖಾನೆ ದುಂಗಾ ಅಂತಾರೆ ಮೋದಿಜಿ ಕ್ಯೂ ಝುಟ್ ಬೊಲ್ತಾ ಹೈ… ಮೈ ಚೌಕಿದಾರ್ ಹುಂ ಅಂತಾ ಹೇಳಿದ್ರಿ ಚೌಕಿದಾರ್ ಕೆಲಸಮಾಡಿದ್ರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವ್ಯಂಗ್ಯವಾಡಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಪ್ರಾಜೆಕ್ಟ್ ಅಪ್ರೂವಲ್ ಆಗಿ ಬಿಲ್ ತೆಗೆಯಬೇಕೆಂದು 40% ಕೊಡಬೇಕು ಎಂದು ಕಾಂಟ್ರ್ಯಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒಂದು ವರ್ಷವೆ ಉರುಳಿದೆ. ಕೆಂಪಣ್ಣ ಅವರು ಮೋದಿ ಅವರಿಗೆ ಪತ್ರದ ಮುಖಾಂತರ ಕೆಲಸ ಮಾಡಲು ಆಗುತ್ತಿಲ್ಲ, ಬೊಮ್ಮಾಯಿ ಸರ್ಕಾರ 40% ಕಮೀಷನ್ ಕೇಳುತ್ತಿದ್ದಾರೆ ನಮ್ಮ ನೆರವಿಗೆ ಬನ್ನಿ ಎಂದು ಮನವಿ ಮಾಡಿದರು ಪ್ರಧಾನಿ ಮೋದಿ ಅವರು ಅವರ ನೆರವಿಗೆ ಮುಂದಾಗುತ್ತಿಲ್ಲ. ಇಷ್ಟೆಲ್ಲ ಆರೋಪಗಳನ್ನು ಬೊಮ್ಮಾಯಿ ಸರ್ಕಾರದ ಮೇಲೆ ಅವರು ಮಾಡಿದರು ಪ್ರಧಾನಿ ಮೋದಿ ಅವರು ಬೊಮ್ಮಾಯಿ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕ್ರಮ ಅಂತು ಬಿಡಿ ಅವರಿಗೆ ಒಂದು ಶೋಕಾಸ್ ನೋಟಿಸ್ ಸಹ ನೀಡಿಲ್ಲ ಎಂದರು.
ಈ ಸರ್ಕಾರದಲ್ಲಿ ಯಾವುದೇ ಒಂದು ಪ್ರಾಜೆಕ್ಟ್ ಅಪ್ರೂವ್ ಆಗಬೇಕಾದರೆ ಎಂಪಿ, ಎಂಎಲ್ಎಗಳಿಗೆ ಲಂಚ ಕೊಡಬೇಕು. ಈ ಸರ್ಕಾರ ಅಲಿ ಬಾಬಾ ಔರ್ ಚಾಲೀಸ್ ಚೋರ್ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು. ನಾನು ಎಂಬಿ ಪಾಟೀಲ ಹಾಗೂ ನಮ್ಮ ಸರ್ಕಾರ ಎನ್ಓಸಿ ರಿಲೀಸ್ ಮಾಡಲು ಐದು ಪೈಸೆ ತೆಗೆದುಕೊಂಡಿಲ್ಲ. ಇವರು ಹತ್ತಿರ ಏನಾದರು ದಾಖಲೆಗಳಿದ್ದರೆ ತೊರಿಸಲಿ ಐದು ಪೈಸೆಯಾದರು ತೆಗೆದುಕೊಂಡಿದದರೆ ರಾಜಕೀಯ ನೀವೃತ್ತಿ ತೆಗೆದುಕೊಳ್ಳುತ್ತೇವೆ ಎಂದರು.
ನಲವತ್ತು ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ನಾನಿದ್ದೇನೆ. ಆದರೆ ಇಂತಹ ಭ್ರಷ್ಟ ಸರ್ಕಾರ ನನ್ನ ಜೀವನದಲ್ಲಿ ನೋಡೆ ಇಲ್ಲ ಎಂದರು.
ಬಿಜೆಪಿ ಸರ್ಕಾರ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಸರ್ಕಾರ ಬಂದಿರುವುದು ವಾಮ ಮಾರ್ಗದಿಂದ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದಾಗಿದೆ. ಆಪರೇಷನ್ ಕಮಲ ಮಾಡಿ ಇವರು ಅಧಿಕಾರಕ್ಕೆ ಬಂದಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಆಪರೇಷನ್ ಕಮಲ ಆರಂಭವಾಗಿದ್ದು 2008ರಿಂದ. ಆಪರೇಷನ್ ಕಮಲ್ ಮೂಲಕ ಕೋಟ್ಯಂತರ ರೂ. ಖರ್ಚು ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಆಪರೇಷನ್ ಕಮಲ ಮಾಡಲು ಇವರಿಗೆ ಹಣ ಎಲ್ಲಿಂದ ಬಂತು. ಅದು ಲೂಟಿ ಮಾಡಿದ ದುಡ್ಡು. ಇನ್ನು ಅಧಿಕಾರಕ್ಕೆ ಬಂದು ಸುಮ್ಮನಾಗದ ಬಿಜೆಪಿಗರು ವ್ಯಾಪಾರದ ಎಂಎಲ್ಎಗಳಿಗೆ ಸಚಿವರನ್ನಾಗಿಮಾಡಿ ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ಅಲ್ಲದೆ ಇವರು ದುಡ್ಡು ತಿನ್ನಲು ಶುರು ಮಾಡಿದ ಮೇಲೆ ಈ ಭಾಗಕ್ಕೆ ಎಲ್ಲಿಂದ ನೀರು ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಪ್ರಗತಿಗೆ ಇವರು ಪ್ರಯತ್ನಿಸಿದರಾ? ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮನೆ ಮಂಜೂರು ಮಾಡಲು ಇವರಿಂದ ಸಾಧ್ಯವಾಗಲಿಲ್ಲ. ಇನ್ನು ನಮ್ಮ ಅವಧಿಯಲ್ಲೆ ಮಂಜೂರು ಮಾಡಿದ್ದ ಮನೆಗಳಿಗೂ ಹಣ ಬಿಡುಗಡೆ ಮಾಡಲು ಇವರಿಂದ ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಬೊಮ್ಮಾಯಿ ಅರ್ಎಸ್ಎಸ್ ಕೈ ಗೊಂಬೆ:
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದರು. ಆಗ ಅವರು ಸದನದಲ್ಲಿ ಕಣ್ಣೀರಹಾಕಿ ಕುರ್ಚಿ ಬಿಟ್ಟುಕೊಟ್ಟರು. ಆದರೆ ಆಗ ಬಿಎಸ್ವೈ ಅವರು ತಮ್ಮನ್ನ ಏಕೆ ಕುರ್ಚಿಯಿಂದ ಕೆಳಗಿಳಿಸಿದರು ಎನ್ನು ಸತ್ಯವನ್ನು ಹೇಳಲಿಲ್ಲ. ಇನ್ನು ಬೊಮ್ಮಾಯಿ ಅವರು ಆರ್ಎಸ್ಎಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಹೇಳಿ ರೈತರ ಸಾಲ ದುಪ್ಪಟ್ಟು ಮಾಡಿದ್ದಾರೆ. ರೈತರು ಬೆಳೆದಂತಹ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಇವರಿಗೆ ಸಾಧ್ಯವಾಗಲಿಲ್ಲ.
ಕೃಷಿ ಸಚಿವ ಎಷ್ಟು ಬೇಜವಾಬ್ದಾರಿ ಇದ್ದಾರೆಂದರೆ ಬೆಳೆಗಳಿಗೆ ರೂಗ ಬಂದು ಹಾಳಾಗಿದೆ ನೋಡಿ ಬಂದ್ರಾ ಅಂತಾ ಕೇಳಿದರೆ ಅವರಿಗೆ ಹೋಗಲು ಆಗಲಿಲ್ಲವೆಂದು ಉತ್ತರ ನೀಡಿದ್ದಾರೆ. ರೈತರ ಕಷ್ಟ ಕೇಳಲು ಹೋಗುವುದಕ್ಕೆ ಆಗುವುದಿಲ್ಲವೆಂದರೆ ನೀವು ಸಚಿವರಾಗಲು ಲಾಯಕಿಲ್ಲ ಎಂದು ಕಿಡಿಕಾರಿದರು.