ಮುಂಬೈ: ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ ಪಕ್ಷದ ಚಿಹ್ನೆಯಾಗಿರುವ ಬಿಲ್ಲು ಮತ್ತು ಬಾಣವನ್ನು ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಬಿಜೆಪಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಿಸ್ಟರ್ ಇಂಡಿಯಾ ಚಿತ್ರದ ಜನಪ್ರಿಯ ಸಂಭಾಷಣೆಯಾಗಿರುವ ಮೊಗ್ಯಾಂಬೋ ಖುಷ್ ಹುವಾ ಡೈಲಾಗ್ ಅನ್ನು ಶಾಗೆ ಹೇಳಿ ಕೆಣಕಿದ್ದಾರೆ.
ಮುಂಬೈನ ಅಂಧೇರಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, “ಅವರು ಎಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದರೆ ಅವರು ನಮ್ಮ ‘ಮಶಾಲ್’ (ಜ್ವಾಲೆಯ ಜ್ಯೋತಿ) ಅನ್ನು ಸಹ ಕಸಿದುಕೊಳ್ಳಬಹುದು. ಅವರು ‘ಬಿಲ್ಲು ಮತ್ತು ಬಾಣ’ ಕದಿಯಬಹುದು ಆದರೆ ಜನರ ಹೃದಯದಿಂದ ಭಗವಾನ್ ರಾಮನನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.
ನಿನ್ನೆ ಯಾರೋ ಒಬ್ಬರು(ಅಮಿತ್ ಶಾ) ಅವರು ಪುಣೆಗೆ ಬಂದಿದ್ದರು. ಮಹಾರಾಷ್ಟ್ರದಲ್ಲಿ ಹೇಗೆ ಕೆಲಸಗಳು ನಡೆಯುತ್ತಿವೆ ಎಂದು ಕೇಳಿದರು. ಮತ್ತೊಬ್ಬರು ಯಾರೋ ಹೇಳಿದರು, ತುಂಬಾ ಚೆನ್ನಾಗಿ ನಡೆಯುತ್ತಿವೆ. ಯಾಕೆಂದರೆ, ಚುನಾವಣಾ ಆಯೋಗ ನಮ್ಮಪರ ಕೆಲಸ ಮಾಡುತ್ತಿದೆ ಎಂದರು. ಆಗ ಅವರು( ಅಮಿತ್ ಶಾ) ಹೇಳಿದರು, ತುಂಬಾ ಚೆನ್ನಾಗಿದೆ, ಮೊಗ್ಯಾಂಬೋ ಖುಷ್ ಹುವಾ ಎಂದು ಖುಷಿ ಪಟ್ಟಿದ್ದಾರೆ ಎಂದು ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಇವರೆಲ್ಲ ಇವತ್ತಿನ ಮೊಗ್ಯಾಂಬೋಗಳು. ಓರಿಜಿನಲ್ ಮೊಗ್ಯಾಂಬೋ ತರಹ, ಜನರು ತಮ್ಮ ಮಧ್ಯೆ ಹೊಡೆದಾಡಿಕೊಂಡು ಇರಬೇಕು ಎಂದು ಬಯಸುತ್ತಾರೆ. ಇದರಿಂದ ಅವರು ಅಧಿಕಾರವನ್ನು ಅನುಭವಿಸಬಹುದು ಎಂದು ಅಮಿತ್ ಶಾ ವಿರುದ್ಧ ಗುಡುಗಿದರು.
ಇವರೆಲ್ಲಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ ಎಂದು ‘ಕಳ್ಳ’ರಿಗೆ ಸವಾಲು ಹಾಕಿದ್ದಾರೆ. “ಕಾಶಿ ಮತ್ತು ಮಹಾರಾಷ್ಟ್ರದ ನಡುವಿನ ಸಂಬಂಧ ಬಹಳ ಹಳೆಯದು, ಇಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ, ಅವರು ನಮ್ಮ ಬಿಲ್ಲು ಮತ್ತು ಬಾಣಗಳನ್ನು ಕದ್ದಿದ್ದಾರೆ ಆದರೆ ಈಗ ಶ್ರೀರಾಮ ನಮ್ಮೊಂದಿಗಿದ್ದಾನೆ, ನಿನ್ನೆ ನಾನು ರಸ್ತೆಯಲ್ಲಿ ಉತ್ತರಿಸಿ ಮತ್ತು ನೀವು ಬನ್ನಿ ಎಂದು ಅವರಿಗೆ ಸವಾಲು ಹಾಕಿದೆ. ಮುಂದೆ ನಿನ್ನ ಬಿಲ್ಲಿನೊಂದಿಗೆ, ನಾನು ನನ್ನ ಜ್ಯೋತಿಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ, ”ಎಂದು ಅವರು ಹೇಳಿದರು.
ನಾನು ಹಿಂದೂ ಮತ್ತು ಹಿಂದುತ್ವದ ನಾಯಕ ಎಂದು ಹೇಳಿದ ಠಾಕ್ರೆ, ಅವರು ಬಿಜೆಪಿಯನ್ನು ತೊರೆದಿದ್ದಾರೆಯೇ ಹೊರತು ಹಿಂದುತ್ವವನ್ನಲ್ಲ ಎಂದು ಹೇಳಿದ್ದಾರೆ.