ನವದೆಹಲಿ: ಕೇಂದ್ರ ಸರ್ಕಾರ ಅದಾನಿ ಗ್ರೂಪ್ ಷೇರುಗಳ ಕುಸಿತದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ “ಅನುಮತಿ ನೀಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಮೋದಿ ಸರ್ಕಾರ ಅದಾನಿಯಂತಹ ಮುಜುಗರದ ವಿಷಯಗಳ ಕುರಿತ ಚರ್ಚೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಅದಾನಿ ವಿಚಾರ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಹುದು ಎಂದು ಭಾವಿಸಿರುವ ಸರ್ಕಾರ, ಪ್ರತಿಪಕ್ಷಗಳ ಚರ್ಚೆಯ ಬೇಡಿಕೆಯನ್ನು ತಳ್ಳಿಹಾಕುತ್ತಿದೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಸಂಸತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸುವ ಸ್ಥಳವಾಗಿದೆ. ದುಃಖದ ಸಂಗತಿಯೆಂದರೆ, ನಮ್ಮ ಸರ್ಕಾರಕ್ಕೆ ಚರ್ಚಿಸುವ ಯೋಗ್ಯತೆ ಕಾಣಿಸುತ್ತಿಲ್ಲ. ಹಾಗಾಗಿ ಅವರು (ಚರ್ಚೆಗಳನ್ನು) ಸ್ಥಗಿತಗೊಳಿಸುತ್ತಿದ್ದಾರೆ. ಪರಿಣಾಮವಾಗಿ ನಾವು ಈಗಾಗಲೇ ಎರಡು ದಿನಗಳನ್ನು ಕಳೆದುಕೊಂಡಿದ್ದೇವೆ” ಎಂದು ತರೂರ್ ವಾಗ್ದಾಳಿ ನಡೆಸಿದರು.
“ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಈ(ಅದಾನಿ ಗ್ರೂಪ್ ಸಮಸ್ಯೆ) ದೇಶದ ನಾಗರಿಕರ ಮೇಲೆ ಪರಿಣಾಮ ಬೀರುವ ಅತ್ಯಂತ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಬಯಸುತ್ತಿವೆ. ಅಲ್ಲದೆ ಸರ್ಕಾರ ಅನುಮತಿಸಬೇಕಾದ ಸಾಕಷ್ಟು ಪ್ರಾಮುಖ್ಯತೆಯ ವಿಷಯ ಇದಾಗಿದೆ” ಎಂದು ತರೂರ್ ಸಂಸತ್ ಭವನದಲ್ಲಿ ಪಿಟಿಐಗೆ ತಿಳಿಸಿದ್ದಾರೆ.