ಯಾದಗಿರಿ: ಭೀಕರ ಅಪಘಾತ ಮಗು ಸೇರಿ ಆರು ಮಂದಿ ಮೃತ್ಯು

ಯಾದಗಿರಿ: ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಅರಕೇರಾ(ಕೆ) ಗ್ರಾಮದ ಬಳಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಐವರು ಹಾಗೂ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಮಹ್ಮದ್ ವಾಜೀದ್ ಹುಸೇನ್ (39), ಮಹಮ್ಮದ್ ಮಜರ್ ಹುಸೇನ್ (79), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ (30), ಇಮ್ರಾನ್ (22), ಉಮೇಜಾ(6 ತಿಂಗಳ ಮಗು) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಮಹ್ಮದ್ ಪಾಜೀಲ್ ಹುಸೇನ್ ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಹೀನಾ ಮತ್ತು ಇಮ್ರಾನ್ ಯಾದಗಿರಿಯ ಚಕ್ರಕಟ್ಟೆಯ ರಂಗನಮೊಹಲ್ಲಾದ ನಿವಾಸಿಗಳಾಗಿದ್ದು, ಉಳಿದ 5 ಜನರು ಲಿಂಗಸುಗೂರು ತಾಲೂಕಿನ(ರಾಯಚೂರು ಜಿಲ್ಲೆ) ಹಟ್ಟಿ ಗ್ರಾಮದ ನಿವಾಸಿಗಳು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಅವರು ತಿಳಿಸಿದ್ದಾರೆ.

ಈ ಎಲ್ಲಾ 7 ಜನ ತೆಲಂಗಾಣದ ಕೊಡಂಗಲ್ ಗ್ರಾಮದಲ್ಲಿ ಜವಳ‌ ಕಾರ್ಯಕ್ರಮ ಮುಗಿಸಿ ತಮ್ಮ ಊರಿಗೆ ಮರಳುತ್ತಿದ್ದರು. ಅವರು ಬರುತ್ತಿದ್ದ ಹ್ಯುಂಡೈ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಹಾಗೂ ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವೇದಮೂರ್ತಿ ಹೇಳಿದ್ದಾರೆ.

ಈ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories