ಹುಬ್ಬಳ್ಳಿ: ರಾಜ್ಯದಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಐದು ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ಐದು ದಿನಗಳ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ ಅವರು, ಈ ಯೋಜನೆಯು ಯುವಕರು ಸ್ವಯಂ ಉದ್ಯೋಗಿಗಳಾಗಲು ಅನುವು ಮಾಡಿಕೊಡುವ ಗುರಿಯನ್ನು ಹೊಂದಿದ್ದು, ಸ್ಫೂರ್ತಿಯ ಚಿಲುಮೆಯಾಗಿರುವ ಸ್ವಾಮಿ ವಿವೇಕಾನಂದರ ಹೆಸರನ್ನು ಯೋಜನೆಗೆ ಇಡಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನಸಂಖ್ಯೆಯನ್ನು ಜನಸಂಖ್ಯಾ ಲಾಭಾಂಶವೆಂದು ಪರಿಗಣಿಸಿದ್ದಾರೆ ಮತ್ತು ರಾಷ್ಟ್ರವನ್ನು ನಿರ್ಮಿಸಲು ಇದರ ಬಲವನ್ನು ಬಳಸಲು ಯೋಜಿಸಿದ್ದಾರೆ. ಖೇಲೋ ಇಂಡಿಯಾದಂತಹ ಕಾರ್ಯಕ್ರಮಗಳ ಮೂಲಕ ಪ್ರಧಾನಿ ಮೋದಿ ಯುವಜನರಲ್ಲಿ ಸಂಚಲನ ಮೂಡಿಸಿದ್ದಾರೆಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ. ಮುಂದಿನ ಒಲಿಂಪಿಕ್ಸ್‌ಗೆ ರಾಜ್ಯವು 75 ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡಿದ್ದು, ಪದಕ ಗೆಲ್ಲಲು ತರಬೇತಿ ನೀಡಲಾಗುತ್ತಿದೆ. ಒಂದು ವಾರದ ಯುವಜನೋತ್ಸವವು ಕರ್ನಾಟಕದ ಯುವಜನತೆಗೆ ಸ್ಪೂರ್ತಿಯಾಗಬೇಕು ಎಂದರು.
ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ರಾಷ್ಟ್ರಕ್ಕಾಗಿ ಯುವಕರ ಪಾತ್ರ ಮಹತ್ವದ್ದಾಗಿದೆ.ಯುವಕರು ಗತಕಾಲದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಭವಿಷ್ಯದತ್ತ ಗಮನಹರಿಸಬೇಕು. ಪ್ರಧಾನಿ ಮೋದಿಯವರು ನೀಡಿದ ವಿಶೇಷ ಒತ್ತಿನಿಂದಾಗಿ ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಜೀತೋ ಇಂಡಿಯಾ ಮತ್ತು ಇತರ ಕಾರ್ಯಕ್ರಮಗಳು ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ಯುವಕರ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ನಿಸಿತ್ ಪ್ರಮಾಣಿಕ್, ರಾಜ್ಯ ಸಚಿವರಾದ ನಾರಾಯಣಗೌಡ, ಸಿ ಸಿ ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.