ಯುವ ಬ್ರಿಗೇಡ್‌ ಸದಸ್ಯನ ಕೊಲೆಗೆ ಬಿಜೆಪಿ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡ್ತಿದೆ: ಎಚ್‌ಸಿ ಮಹದೇವಪ್ಪ

ಮೈಸೂರು : ಹನುಮ ಜಯಂತಿ ವೇಳೆ ಯುವ ಬ್ರಿಗೇಡ್‌ನವರಲ್ಲೇ ಬೈಕ್ ನಿಲ್ಲಿಸುವ ವಿಚಾರ, ಪೋಟೋ ವಿಚಾರಕ್ಕೆ ಜಗಳ ನಡೆದಿವೆ. ನಂತರ ಯುವ ಬ್ರಿಗೇಡ್‌ನಲ್ಲಿದ್ದವರೇ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಈ ಕೊಲೆಯಾಗಿದೆ. ಈ ಕೊಲೆಯಲ್ಲಿ ರಾಜಕೀಯ ಪಿತೂರಿ ಮಾಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ.

ತಿ ನರಸೀಪುರದಲ್ಲಿ ಮಾತನಾಡಿದ ಅವರು, ವೇಣುಗೋಪಾಲ್‌ ನಾಯಕ ಹತ್ಯೆ ಧರ್ಮದ ವ್ಯಾಪ್ತಿ ಹಾಗೂ ರಾಜಕೀಯ ವ್ಯಾಪ್ತಿ ಎರಡಕ್ಕೂ ಬರುವುದಿಲ್ಲ. ಯುವ ಬ್ರಿಗೇಡ್ ಕಟ್ಟಿಕೊಂಡು ಹನುಮ ಜಯಂತಿಯನ್ನು ಚೆನ್ನಾಗಿಯೇ ಮಾಡಿದ್ದಾರೆ. ಹನುಮ ಜಯಂತಿಗೆ ಯಾರದೇ ಅಡ್ಡಿ ತಕಾರಾರು ಇರಲಿಲ್ಲ. ಯುವ ಬ್ರಿಗೇಡ್‌ನವರಿಂದಲೇ ಕೊಲೆಯಾಗಿದೆ ಎಂದು ಹೇಳಿದರು.

ಕೊಲೆಗೆ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯವರ ಈ ಆಟ ಬಹಳ ಕಾಲ ನಡೆಯುವುದಿಲ್ಲ. ಎಲ್ಲದಕ್ಕೂ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡೋದು ಬಿಜೆಪಿಯ ಚಾಳಿ, ಹತ್ಯೆಯ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಾ ಕಾರಣ ಎಳೆದು ತರುತ್ತಿದೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾ ಕಾರಣ ಆರೋಪ ಮಾಡಿದ್ದರು. ಮಾಫಿಯಾ ಮಾಡಿದ್ದವರೇ ಹಿಂದೆಯೂ ಮಗನ ಮೇಲೆ ಕೇಸ್ ಕೊಟ್ಟಿದ್ದರು. ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದರು.

ಪೊಲೀಸರ ತನಿಖೆ ಸರಿ ದಾರಿಯಲ್ಲಿ ಇದೆ, ಘಟನೆಯಾದ 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆಗೆ ಧರ್ಮದ ಕಲರ್ ಕೊಡಲು ಬಿಜೆಪಿಯವರು ಹೊರಟ್ಟಿದ್ದಾರೆ. ಈ ಕೊಲೆ ದೌರ್ಜನ್ಯ ಪ್ರಕರಣ ಅಲ್ಲ. ಆದರೆ, ಎಸ್‌ಸಿ, ಎಸ್‌ಟಿ ಸಮುದಾಯದ ಯಾರಾದರೂ ಈ ರೀತಿ ಕೊಲೆಯಾದರೆ 8 ಲಕ್ಷ ರೂ. ಪರಿಹಾರ ಕೊಡಬಹುದು. ಅದರಂತೆ ಪರಿಹಾರದ ಮೊದಲ ಕಂತು 4.12 ಲಕ್ಷ ರೂ. ಅನ್ನು ಈಗ ಕೊಟ್ಟಿದ್ದೇವೆ. ಪ್ರಕರಣದ ಚಾರ್ಜ್ ಶೀಟ್ ಆದ ಮೇಲೆ ಉಳಿದ ಹಣ ಕೊಡುತ್ತೇವೆ. ಕೊಲೆಯಾದ ವ್ಯಕ್ತಿಯ ಪತ್ನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಲು ಯತ್ನಿಸಲಾಗುವುದು ಎಂದರು.

Latest Indian news

Popular Stories