ಬೆಳಗಾವಿ: ರಾಜಧಾನಿಯನ್ನ ಹೊರತುಪಡಿಸಿ ರಾಜ್ಯದಲ್ಲಿ ಬೆಳಗಾವಿ(Belagavi) ಜಿಲ್ಲೆ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಹೊಂದಿರುವ ಜಿಲ್ಲೆ. ಹದಿನೆಂಟು ಕ್ಷೇತ್ರದ ಪೈಕಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಸಾಕಷ್ಟು ರಣತಂತ್ರವನ್ನ ರೂಪಿಸಿದ್ದವು.
ಮುಖ್ಯವಾಗಿ ಜಿಲ್ಲೆಯ ಉಸ್ತುವಾರಿ ಹೊತ್ತು ಅತೀ ಹೆಚ್ಚು ಸ್ಥಾನ ಗೆಲ್ಲಲು ಹೊರಟಿದ್ದ ರಮೇಶ್ ಜಾರಕಿಹೊಳಿ(Ramesh Jarkiholi)ಗೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಹೈಕಮಾಂಡ್ ಮನವೊಲಿಸಿ 6 ಜನ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ್ದರು. ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ್ ಮನ್ನೊಳ್ಕರ್, ಉತ್ತರದಲ್ಲಿ ಡಾ.ರವಿ ಪಾಟೀಲ್, ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿ, ರಾಮದುರ್ಗದಲ್ಲಿ ಚಿಕ್ಕರೇವಣ್ಣ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ರಮೇಶ್ ಯಶಸ್ವಿಯಾಗಿದ್ದರು. ಈ 6 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸೋತಿದ್ದು ಇದೀಗ ಸಾಹುಕಾರ್ಗೆ ಭಾರಿ ಹಿನ್ನಡೆಯಾಗಿದೆ.
ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸುವುದರಲ್ಲೇ ಎಡವಿ ಈ ಮಟ್ಟಿಗೆ ಮುಖಬಂಗ ಅನುಭವಿಸಿದ್ರೂ ಎನ್ನುವ ಚರ್ಚೆ ಇದೀಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪಕ್ಷಕ್ಕೆ ಸಂಬಂಧ ಇಲ್ಲದ ನಾಗೇಶ್ ಮನ್ನೋಳ್ಕರ್ ಮತ್ತು ಚಿಕ್ಕರೇವಣ್ಣನವರಿಗೆ ಟಿಕೆಟ್ ಕೊಡಿಸಿದ್ರೆ, ಆ್ಯಕ್ಟೀವ್ ಇಲ್ಲದ ರವಿ ಪಾಟೀಲ್ ಗೆ ಟಿಕೆಟ್ ಕೊಡಿಸಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಅಥಣಿಯಲ್ಲಿ ಸವದಿ ವಿರುದ್ದ ಸೋತ್ರೆ, ಕಾಗವಾಡದಲ್ಲಿ ಗೆಲ್ತೇವಿ ಎನ್ನುವ ಹುಮ್ಮಸ್ಸಿನಲ್ಲಿ ಮತದಾರರನ್ನ ಮರೆತು ಸೋಲು ಕಂಡ್ರು. ಇನ್ನು ಯಮಕನಮರಡಿಯಲ್ಲಿ ಟಿಕೆಟ್ ಕೊಡಿಸಿ, ಒಂದೇ ಒಂದು ದಿನ ಪ್ರಚಾರಕ್ಕೆ ಹೋಗದೇ ಒಳಗೊಳಗೆ ಅಡ್ಜಸ್ಟ್ ಮಾಡಿಕೊಂಡು ಸೋತ್ರು ಅನ್ನೋ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.