ಮಂಗಳೂರು: ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ ಕುರಿತು ಬಿಟ್ಟು, ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದರ ಕುರಿತು ಜನರು ಚರ್ಚೆಯಲ್ಲಿ ತೊಡಗುವಂತೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಹೇಳಿರುವ ಕುರಿತು ಕನ್ನಡ ಪ್ರಭ ಪತ್ರಿಕೆ ವರದಿ ಮಾಡಿದೆ.
‘ಬೂತ್ ವಿಜಯ ಅಭಿಯಾನ’ದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವನ್ನು “ಭಯೋತ್ಪಾದಕರ ಪಕ್ಷ” ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಭಯೋತ್ಪಾದಕರಿಗೆ ಫೀಲ್ಡ್ ಡೇ ಆಗುತ್ತದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಲವ್ ಜಿಹಾದ್’ ಹೆಚ್ಚಾಗಲಿದೆ. ಗೋಹತ್ಯೆ ಮತ್ತು ಧಾರ್ಮಿಕ ಮತಾಂತರದ ವಿರುದ್ಧದ ಕಾನೂನುಗಳನ್ನು ಹಿಂಪಡೆಯುತ್ತಾರೆ. ಜನರು ಈಗ ‘ನವ ಕರ್ನಾಟಕ’ ಬೇಕೇ ಅಥವಾ ‘ಭಯೋತ್ಪಾದನೆಯ ನಾಡು ಬೇಕೇ ಎಂಬುದನ್ನು ನಿರ್ಧರಿಸಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ)ಯನ್ನು ನಿಷೇಧಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಟ್ಟ ನಿರ್ಧಾರ ಕೈಗೊಂಡರು. ಈ ಸಂಘಟನೆಗಳನ್ನು ನಿಷೇಧಿಸದಿದ್ದರೆ ಮೋನಪ್ಪ ಭಂಡಾರಿ ಮತ್ತು ಹರಿಕೃಷ್ಣ ಬಂಟ್ವಾಳ್ (ಬಿಜೆಪಿ ನಾಯಕರು) ಇಷ್ಟೊತ್ತಿಗಾಗಲೇ ಸತ್ತಿರುತ್ತಿದ್ದರು ಎಂದು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಲಿದ್ದಾರೆ “ಈಗಷ್ಟೇ ಮುಗಿದ ಚಳಿಗಾಲದ ಅಧಿವೇಶನದಲ್ಲಿ ನೀವು (ಕಾಂಗ್ರೆಸ್) ‘ಶೇಕಡಾ 40 ಕಮಿಷನ್’ ಮತ್ತು ‘ಪೇ ಸಿಎಂ’ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ. ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಜೈಲಿನಲ್ಲಿರುವ ಕಾರಣ ನೀವು ಆ ವಿಚಾರದ ಕುರಿತು ದನಿ ಎತ್ತಲಿಲ್ಲ. ಸಿದ್ದರಾಮಯ್ಯ ಲೋಕಾಯುಕ್ತವನ್ನು ಮುಚ್ಚಿದರು. ಆದರೆ, ನಾವು ಅದನ್ನು ಬಲಪಡಿಸಿದ್ದೇವೆ. ಭ್ರಷ್ಟಾಚಾರ ಪ್ರಕರಣಗಳ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸುವಂತೆ ನಾವು ಕೇಳಿದ್ದೆವು. ಆದರೆ, ಅವರು ಮಾಡಲಿಲ್ಲ. ಕಾಂಗ್ರೆಸ್ ಪಕ್ಷವೇ ಭ್ರಷ್ಟ ಪಕ್ಷ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅತ್ಯಂತ ಭ್ರಷ್ಟರು ಎಂದು ವಾಗ್ದಾಳಿ ನಡೆಸಿದರು.
ಬಳಿಕ 100 ದಿನ ಬಾಕಿ ಇರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ರಾಮನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಾದ ಒಕ್ಕಲಿಗ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಅಮಿತ್ ಶಾ ಪ್ರವಾಸಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಂಟು ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.
ನಮ್ಮ ಗೆಲುವು ನಮ್ಮ ಸಂಘಟನೆಯ ಬಲದ ಮೇಲೆ ಇರಬೇಕು. ಭಾರತವು ಸಾಂಸ್ಕೃತಿಕವಾಗಿ ಪರಿವರ್ತನೆ ಹೊಂದಬೇಕು ಮತ್ತು ಅದಕ್ಕಾಗಿ ನಾವು ಬೂತ್ ಮಟ್ಟಗಳಲ್ಲಿ ಗೆಲ್ಲಬೇಕು ಎಂದು ಹೇಳಿದರು.