ಮುಂಬೈ: ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಈಗ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಪ್ರತಿಭಟನೆಯಲ್ಲಿ ಒಬಿಸಿ ಮೀಸಲಾತಿ ಕುರಿತು ಚರ್ಚೆ ನಡೆಸುತ್ತಿದ್ದಾಗ ಪಾಟೀಲ್ ಅವರು, ನಿಮಗೆ ರಾಜಕೀಯ ಅರ್ಥವಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡಿ ಎಂದು ಸುಪ್ರಿಯಾ ಸುಳೆ ವಿರುದ್ಧ ಕಿಡಿ ಕಾರಿದ್ದಾರೆ. ನೀವೇಕೆ ರಾಜಕೀಯದಲ್ಲಿದ್ದೀರಿ, ಮನೆಗೆ ಹೋಗಿ ಅಡುಗೆ ಮಾಡಿ, ದೆಹಲಿಗೆ ಅಥವಾ ಸ್ಮಶಾನಕ್ಕೆ ಹೋಗಿ, ಆದರೆ ನಮಗೆ ಒಬಿಸಿ ಕೋಟಾವನ್ನು ತನ್ನಿ, ನೀವು ಸಂಸದರಾಗಿಯೂ ಮುಖ್ಯಮಂತ್ರಿ ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ಪಡೆಯುವುದು ಹೇಗೆ ಎಂದು ನಿಮಗೆ ತಿಳಿದಿಲ್ಲದಿದ್ದರೆ ಹೇಗೆ? ಎಂದು ಅವರು ವ್ಯಂಗ್ಯವಾಡಿದರು.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಪಾಟೀಲ್, ಮಹಿಳೆಯರು ಅಥವಾ ಸುಪ್ರಿಯಾ ಸುಳೆ ಅವರನ್ನು ಅಗೌರವಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನಾನು ಗ್ರಾಮೀಣ ಶೈಲಿಯಲ್ಲಿ ಮಾತನಾಡಿದ್ದೇನೆ. ನಾನು ಸುಳೆ ಅವರನ್ನು ಭೇಟಿಯಾದಾಗ, ನಾವು ಯಾವಾಗಲೂ ಪರಸ್ಪರ ಗೌರವದಿಂದ ಅಭಿನಂದಿಸುತ್ತೇವೆ. ನಾನು ಆಡಿರುವ ಮಾತುಗಳು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.