ರಾಜಸ್ಥಾನ: ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳು, 10 ಮಂದಿಗೆ ಗಾಯ

ನವದೆಹಲಿ: ಸೋಮವಾರ ಮುಂಜಾನೆ ರಾಜಸ್ಥಾನದಲ್ಲಿ ರೈಲು ಹಳಿತಪ್ಪಿದ ಪರಿಣಾಮ ಸುಮಾರು 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ಪಾಲಿಯ ರಾಜ್ಕಿವಾಸ್‌ನಲ್ಲಿ ಮುಂಜಾನೆ 3:27 ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಸೂರ್ಯನಗರಿ ಎಕ್ಸ್‌ಪ್ರೆಸ್‌ನ ಎಂಟು ಬೋಗಿಗಳು ಜೋಧ್‌ಪುರ ವಿಭಾಗದ ರಾಜ್ಕಿವಾಸ್-ಬೊಮದ್ರಾ ವಿಭಾಗದ ನಡುವೆ ಹಳಿತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂದ್ರಾ ಟರ್ಮಿನಲ್‌ನಿಂದ ಹೊರಟ ರೈಲು ಜೋಧ್‌ಪುರಕ್ಕೆ ತೆರಳುತ್ತಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಾಯುವ್ಯ ರೈಲ್ವೆಯ ಉನ್ನತ ಅಧಿಕಾರಿಗಳು ಜೈಪುರದ ಪ್ರಧಾನ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅಪಘಾತ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವಾಯುವ್ಯ ರೈಲ್ವೆಯ ಸಿಪಿಆರ್‌ಒ ತಿಳಿಸಿದ್ದಾರೆ.

ಈಮಧ್ಯೆ, ರಾಜಸ್ಥಾನದಲ್ಲಿ ರೈಲು ಹಳಿತಪ್ಪಿದ ಘಟನೆಯಿಂದಾಗಿ ಹಲವಾರು ರೈಲುಗಳ ಸಂಚಾರಕ್ಕೆ ತೊಂದರೆಯಾಯಿತು.

ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡಿದ ಪ್ರಯಾಣಿಕರೊಬ್ಬರು, ಮಾರ್ವಾರ್ ಜಂಕ್ಷನ್‌ನಿಂದ ಹೊರಟ ಐದು ನಿಮಿಷಗಳಲ್ಲಿ ರೈಲಿನೊಳಗೆ ಕಂಪನದಂತಹ ಶಬ್ದ ಕೇಳಿಸಿತು. ಮತ್ತು ಅದಾದ 2-3 ನಿಮಿಷಗಳ ನಂತರ ರೈಲು ನಿಂತಿತು. ನಾವು ಕೆಳಗಿಳಿದೆವು ಮತ್ತು ಆಗ ಕನಿಷ್ಠ 8 ಸ್ಲೀಪರ್ ಕ್ಲಾಸ್ ಕೋಚ್‌ಗಳು ಹಳಿಗಳಿಂದ ಹೊರಬಂದಿದ್ದವು. 15-20 ನಿಮಿಷಗಳಲ್ಲಿ , ಆಂಬ್ಯುಲೆನ್ಸ್‌ಗಳು ಬಂದವು’ ಎಂದಿದ್ದಾರೆ.

Latest Indian news

Popular Stories