ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗುತ್ತದೆ ಎಂಬುವುದು ಊಹಾಪೋಹ – ಇಂಧನ ಸಚಿವ ಸುನೀಲ್ ಕುಮಾರ್

ದಾವಣಗೆರೆ: ರಾಜ್ಯದಲ್ಲಿ ಕಲ್ಲಿದ್ದಲು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಕೊರತೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ನಿನ್ನೆ ಎಂಸಿಎಎಲ್ ನಿಂದ ಕಲ್ಲಿದ್ದಲು ತುಂಬಿಕೊಂಡು ಹೊರಟಿದ್ದ ಒಂದು ರೇಕ್ಸ್ ಇಂದು ಮುಂಜಾನೆ ರಾಜ್ಯಕ್ಕೆ ಬಂದಿದ್ದು, ಇದರಿಂದ ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ಘಟಕಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಪ್ರತಿದಿನ ರಾಜ್ಯಕ್ಕೆ 8 ರೇಕ್ಸ್ ಗಳಲ್ಲಿ ಕಲ್ಲಿದ್ದಲ್ಲು ಕಳುಹಿಸಿಕೊಡುತ್ತಿದೆ. ಇನ್ನೂ ಹೆಚ್ಚುವರಿಯಾಗಿ ಎರಡು ರೇಕ್ ಗಳು ಬೇಕು ಎಂಬ ರಾಜ್ಯದ ಬೇಡಿಕೆಗೆ ಕೇಂದ್ರ ಸ್ಪಂದಿಸಿದ್ದು, ಇಂದು ಅದನ್ನೂ ಕೂಡ ಕಳುಹಿಸಿಕೊಟ್ಟಿದೆ. ನವೆಂಬರ್ ಅಂತ್ಯದ ವೇಳೆಗೆ ಇನ್ನೂ ಎರಡು ರೇಕ್ಸ್ಗಳನ್ನು ಹೆಚ್ಚು ಮಾಡಬೇಕೆಂಬ ರಾಜ್ಯದ ಬೇಡಿಕೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಆದ್ದರಿಂದ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರುವುದಿಲ್ಲ ಎಂದರು.

ದೇಶದಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ, ಹೀಗಾಗಿ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ವರದಿಗಳನ್ನು ಕಲ್ಲಿದ್ದಲು ಸಚಿವಾಲಯ ಸಹ ತಳ್ಳಿ ಹಾಕಿದೆ. ದೇಶದಲ್ಲಿ ಸಾಕಷ್ಟು ಕಲ್ಲಿದ್ದಲಿನ ಸಂಗ್ರಹ ಇದೆ ಎಂದು ಸ್ಪಷ್ಟನೆ ನೀಡಿದೆ. ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಆಗಲಿದೆ ಎಂಬ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಭಾರೀ ಮಳೆ, ಕಲ್ಲಿದ್ದಲು ಆಮದು ಸ್ಥಗಿತ ಹಾಗೂ ವಿದ್ಯುತ್ ಬೇಡಿಕೆ ಹೆಚ್ಚಳದಿಂದಾಗಿ ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿತ್ತು, ಬೇಡಿಕೆಯೂ ಹೆಚ್ಚಾಗಿತ್ತು. ಹೀಗಾಗಿ, ಉತ್ಪಾದನೆಯನ್ನೂ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

Latest Indian news

Popular Stories