ರಾಜ್ಯದಲ್ಲಿ ಹತ್ತು ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜಿಗೆ ಗ್ರೀನ್ ಸಿಗ್ನಲ್!

ಮಂಗಳೂರು: ರಾಜ್ಯದಲ್ಲಿ 10 ಮುಸ್ಲಿಂ ಹೆಣ್ಣು ಮಕ್ಕಳ ಕಾಲೇಜು ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಯಾದಗರಿ, ರಾಯಚೂರು ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ 10 ಕಾಲೇಜುಗಳನ್ನು ಸ್ಥಾಪನೆಗೆ ಶೀಘ್ರವೇ ಕಾರ್ಯತಂತ್ರ ನಡೆಯಲಿದೆ ಎನ್ನಲಾಗಿದೆ.

ರಾಜ್ಯ ವಕ್ಫ್ ಬೋರ್ಡ್ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸುವ ಪ್ರಸ್ತಾಪ ಸಲ್ಲಿಸಿತ್ತು.ಇದಕ್ಕೆ ಸರಕಾರದ ಅನುಮೋದನೆ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪ್ರತಿ ಕಾಲೇಜಿಗೆ 2.5 ಕೋಟಿ ರೂ.ಅನುದಾನವನ್ನೂ ಮೀಸಲಿರಿಸಲಾಗಿದೆ ಎನ್ನಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಂದಿನ ತಿಂಗಳು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್‌ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ.

ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ.ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳು ನಿರ್ಮಾಣವಾಗಲಿದೆ.

ಶಂಕುಸ್ಥಾಪನೆ ನೆರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ಆರಂಭವಾಗಲಿದ್ದು, ನಂತರದ ವರ್ಷ ದ್ವಿತೀಯ ಪಿಯುಸಿ ಬಳಿಕ ಪದವಿವರೆಗೂ ಮುಂದುವರಿಯಲಿದೆ.


Latest Indian news

Popular Stories

error: Content is protected !!