ಶಿವಮೊಗ್ಗ: ರಾಜ್ಯ ಮತ್ತು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಅತ್ಯಗತ್ಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು, ಅದೇ ಸರ್ಕಾರವನ್ನು ಮರುಸ್ಥಾಪಿಸುವ ಅವಶ್ಯಕತೆಯಿದೆ.’ಈ ಬಾರಿ ಭಾರತೀಯ ಜನತಾ ಪಾರ್ಟಿ ಪೂರ್ಣ ಬಹುಮತದ ಸರ್ಕಾರವನ್ನು ರಚನೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕಾರ್ಯಗಳು ಪ್ರಾರಂಭವಾಗಿದೆ. ಕೇಂದ್ರದ ನಮ್ಮ ನಾಯಕರು ರಾಜ್ಯದ ಎಲ್ಲಾ ನಾಯಕರು ಕೂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ” ಎಂದರು.
ನಮ್ಮ ಸರ್ಕಾರವು ರಾಜ್ಯದ ಜನರಿಗೆ ಕೊಟ್ಟ ಭರವಸೆಗಳು ಈಡೇರಿಸಿದೆ. ನಮ್ಮ ನಾಯಕರು ಮಾಡಿರುವ ಶಿಲಾನ್ಯಾಸವನ್ನು ಕಾಮಗಾರಿ ಮೂಲಕ ಪೂರ್ಣಗೊಳಿಸುವುದು ಸರ್ಕಾರದ ಗುರಿ ಆಗಿದೆ. ಹಿಂದಿನ ಸರ್ಕಾರ ಹಾಗೂ ಇಂದಿನ ಸರ್ಕಾರಕ್ಕೆ ಬಹಳ ವ್ಯತ್ಯಾಸವಿದೆ” ಎಂದು ತಿಳಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದಾಗ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೇವಲ 17 ರೈತರ ಹೆಸರನ್ನು ಯೋಜನೆಗೆ ಕಳುಹಿಸಿತ್ತು. ಆದರೆ, ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಅದೇ ಯೋಜನೆ ರಾಜ್ಯದ 54 ಲಕ್ಷ ರೈತರನ್ನು ತಲುಪಿದೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ಲಾಭವನ್ನು 54 ಲಕ್ಷ ರೈತರು ಪಡೆಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದ ಎಲ್ಲ ರಾಜ್ಯದಲ್ಲಿ ನಡೆಯುವ ಚುನಾವಣೆಗಳ ನೇತೃತ್ವ ವಹಿಸುತ್ತಾರೆ. ಯಾಕೆಂದರೆ, ದೇಶದ ರಕ್ಷಣೆ ಹಾಗೂ ಅಭಿವೃದ್ದಿಗಾಗಿ ಎಲ್ಲ ಕಡೆಗಳಲ್ಲೂ ಬೆಂಬಲ ಸಿಗುತ್ತಿದೆ. ಕರ್ನಾಟಕ ಹಾಗೂ ದೇಶದ ಮುಖಂಡರು ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಸಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ” ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಹೊಸ ಕಾಮಗಾರಿಗಳ ಉದ್ಘಾಟನೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಸರ್ಕಾರ ಎಷ್ಟು ವೇಗದಲ್ಲಿ ಕೆಲಸ ಮಾಡುತ್ತದೆ ಎಂದರೆ ಕಳೆದ ಒಂಬತ್ತು ವರ್ಷಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು.