ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ – ಬಸವರಾಜ್ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರ ಯಾವುದೇ ನಾಯಕನೂ ಕೂಡ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ. ನಾವು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುಜರಾತ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಸನ್ಮಾನ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರತಿದಿನ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಬಯಸುವುದಿಲ್ಲ. ಈ ಕುರಿತು ಆರೋಪಗಳನ್ನು ಮಾಡುತ್ತಿರುವವರು ಹಗರಣ ಏನು ಹಾಗೂ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತಿಳಿಸಲಿ. ಈಗಾಗಲೇ 8-9 ತಿಂಗಳ ಹಿಂದೆಯೇ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಲಾಗಿದೆ. ಅಂತರಾಷ್ಟ್ರೀಯ ವಿಷಯವಾಗಿರುವುದರಿಂದ ಸಿಬಿಐನ ಇಂಟರ್ ಪೋಲ್ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ. ಈ ಹಗರಣದ ಮೊತ್ತದ ಬಗ್ಗೆ ವಿಭಿನ್ನ ಹೇಳಿಕೆಗಳು ಬರುತ್ತಿವೆ. ಇದಕ್ಕೆ ಯಾವುದೇ ದಾಖಲೆಗಳ ಆಧಾರವಿಲ್ಲ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೂ ಇಲ್ಲ. ನಾವು ಯಾರೂ ಭಾಗಿಯಾಲ್ಲ ಎಂದರು.

ಮುಖ್ಯಮಂತ್ರಿ ಹುದ್ದೆಗೆ ಸಂಚಕಾರ ಬರಲಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಎಂದಷ್ಟೇ ತಿಳಿಸಿದರು.

Latest Indian news

Popular Stories