ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಫ್ಲೈಯಿಂಗ್ ಕಿಸ್’ ಮಾಡಿದ್ದನ್ನು ಯಾರೂ ನೋಡಿಲ್ಲ ಮತ್ತು ಅದರ ಬಗ್ಗೆ ಯಾವುದೇ ದಾಖಲೆ ಇದೆ ಅಂತ ನನಗೆ ಅನಿಸುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗುರುವಾರ ಹೇಳಿದ್ದಾರೆ.
ಇಂದು ಸಂಸತ್ ಹೊರಗೆ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್ ಅವರು, ನಾನು ಅದನ್ನು ಖಂಡಿತವಾಗಿಯೂ ನೋಡಿಲ್ಲ. ಬೇರೆ ಯಾರು ನೋಡಿದ್ದಾರೆ ಅಂತಾನೂ ನನಗೆ ಗೊತ್ತಿಲ್ಲ. ಅಲ್ಲಿ ಏನಾಯಿತು ಮತ್ತು ಅವರು ಯಾರಿಗೆ ‘ಫ್ಲೈಯಿಂಗ್ ಕಿಸ್’ ಮಾಡಿದರು ಎಂಬುದು ಸಂಸದ TV ಯಲ್ಲಿಯೂ ರೆಕಾರ್ಡ್ ಆಗಿಲ್ಲ ಎಂದು ನಾನು ನಂಬುತ್ತೇನೆ. ಹಾಗಾಗಿ, ನಮಗೆ ಆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ನಿನ್ನೆ ಅವಿಶ್ವಾಸ ನಿರ್ಣಯದ ಕುರಿತು ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, “ಕೆಲವರ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. ನನಗಿಂತ ಮುಂಚೆ ಮಾತನಾಡಿದ ವ್ಯಕ್ತಿ, ಹೊರಡುವ ಮುನ್ನ ಅಸಭ್ಯತೆಯನ್ನು ಪ್ರದರ್ಶಿಸಿದರು. ಸ್ತ್ರೀದ್ವೇಷಿ ಪುರುಷನೊಬ್ಬನಿಂದ ಮಾತ್ರ ಮಹಿಳೆಯರು ಹಾಜರಿರುವ ಸದನಕ್ಕೆ ಫ್ಲೈಯಿಂಗ್ ಕಿಸ್ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೆ ‘ಫ್ಲೈಯಿಂಗ್ ಕಿಸ್’ ಮಾಡಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಹಿಳಾ ಸಂಸದರು ಆಗ್ರಹಿಸಿದ್ದರು.