ರಾಹುಲ್- ರಾಜ್ಯ ಕಾಂಗ್ರೆಸ್ ಮುಖಂಡರ ಭೇಟಿ : 2023 ಚುನಾವಣೆ ಕುರಿತು ಚರ್ಚೆ

ಬೆಂಗಳೂರು: ಭಾವನಾತ್ಮಕ ವಿಷಯಗಳನ್ನು ಕೆದಕುವ ಮೂಲಕ ರಾಜ್ಯವನ್ನು ಕೋಮುವಾದ ಮತ್ತು ಧ್ರುವೀಕರಣಗೊಳಿಸಲು ಪ್ರಯತ್ನಿಸುವವರ ವಿರುದ್ಧ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಗುರುವಾರ ರಾಜ್ಯದ ಮುಖಂಡರನ್ನು ಎಚ್ಚರಿಸಿದ್ದಾರೆ. ಅಂತಹ ಪ್ರಯತ್ನಗಳ ವಿರುದ್ಧ ಕಾಂಗ್ರೆಸ್ ಪಕ್ಷವು ಎಚ್ಚರವಾಗಿರಬೇಕು ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮೇಲ್ಮನೆ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರು ಪಾಲ್ಗೊಂಡಿದ್ದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸಮಾಜ ಒಡೆಯುವ ಪ್ರಯತ್ನಗಳ ವಿರುದ್ಧ ಎಚ್ಚರ ವಹಿಸುವಂತೆ ಸೂಚಿಸಿದರು. ಶಾಂತಿಯುತ ರಾಜ್ಯವನ್ನು ಧ್ರುವೀಕರಣಗೊಳಿಸುವ ಪ್ರಯತ್ನಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ವಿಶೇಷವಾಗಿ ಜಿಲ್ಲಾ ಮತ್ತು ತಾಲೂಕ್ ಮಟ್ಟದಲ್ಲಿ ಬಲಗೊಳಿಸುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮಾತನಾಡಿದ್ದರು. ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿಯಿರುವಂತೆಯೇ, ಸಭೆ, ಕಾರ್ಯಕ್ರಮ ಆಯೋಜಿಸುವ ಮೂಲಕ ಪಕ್ಷ ಸಂಘಟಿಸುವಂತೆ ಸೂಚಿಸಿದರು.

ರಾಷ್ಟ್ರಧ್ವಜಕ್ಕೆ ಅಪಮಾನ ಕುರಿತಂತೆ ಇತ್ತೀಚಿಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕುರಿತಂತೆ ಚರ್ಚೆ ನಡೆಸಲಾಯಿತು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೊಂದಿಗೆ ರಾಹುಲ್ ಗಾಂಧಿ ಮಾತುಕತೆ ನಡೆಸಿದರು.

ದಲಿತ, ಅಹಿಂದ ಮತ್ತು ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಈ ಮೂವರು ಪ್ರತಿನಿಧಿಗಳು 2023ರ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟು ಮಹತ್ವದ್ದಾಗಿದ್ದು, ವಿವಾದಗಳು, ಅಭ್ಯರ್ಥಿಗಳ ಆಯ್ಕೆ ಮತ್ತಿತರ ವಿಚಾರಗಳಲ್ಲಿ ಒಗಟ್ಟು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗೆ ಅಧಿಕಾರಕ್ಕೆ ಬರದಂತೆ ತಡೆಗಟ್ಟಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!