ರಿಷಭ್‌ ಪಂತ್‌ಗೆ ಬೇಕಿದೆ ಆರು ತಿಂಗಳು ವಿಶ್ರಾಂತಿ – ವೈದ್ಯರ ಮಾಹಿತಿ

ಹೊಸದಿಲ್ಲಿ/ಡೆಹ್ರಾ ಡೂನ್‌: ಭೀಕರ ರಸ್ತೆ ಅಪಘಾತದಲ್ಲಿ ಪವಾಡಸದೃಶ ರೀತಿಯಲ್ಲಿ ಪಾರಾದ ಕ್ರಿಕೆಟಿಗ ರಿಷಭ್‌ ಪಂತ್‌ ಅವರಿಗೆ ಆರು ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರು ಮುಂದಿನ ಆಸ್ಟ್ರೇಲಿಯ ವಿರುದ್ಧದ ಸರಣಿಯನ್ನಷ್ಟೇ ಅಲ್ಲ, 2023ರ ಐಪಿಎಲ್‌ ಪಂದ್ಯಾವಳಿಯಿಂದಲೂ ಹೊರಗುಳಿಯುವುದು ಅನಿವಾರ್ಯವಾಗುತ್ತದೆ.

ಹೃಷಿಕೇಶದ ಎಐಐಎಂಎಸ್‌ ನ್ಪೋರ್ಟ್ಸ್ ಇಂಜ್ಯುರಿ ವಿಭಾಗದ ಡಾ| ಖಮರ್‌ ಆಜಂ ನೀಡಿರುವ ಹೇಳಿಕೆ ಪ್ರಕಾರ, ರಿಷಭ್‌ ಪಂತ್‌ ಮೂರರಿಂದ ಆರು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಅವರು ಆಸ್ಟ್ರೇಲಿಯ ವಿರುದ್ಧದ ಸರಣಿ ಹಾಗೂ 16ನೇ ಐಪಿಎಲ್‌ ಪಂದ್ಯಾವಳಿಯಲ್ಲಿ ಆಡುವ ಯಾವುದೇ ಸಾಧ್ಯತೆ ಇಲ್ಲ.

ಅಪಘಾತದಲ್ಲಿ ಪಂತ್‌ ಹಣೆಯಲ್ಲಿ ಸೀಳು ಗಾಯಗಳಾಗಿವೆ. ಮೊಣಕಾಲಿನ ಅಸ್ಥಿರಜ್ಜು ಹಾನಿಗೀಡಾಗಿದೆ. ಇದು ಸರಿಯಾಗಲು ಬಹಳ ಸಮಯ ತಗಲುತ್ತದೆ. ಅವರ ದೇಹ ಚಿಕಿತ್ಸೆಗೆ ಹೇಗೆ ಸ್ಪಂದಿಸಲಿದೆ ಎಂಬುದು ಮುಖ್ಯ. ಕೆಲವೊಮ್ಮೆ ಇದಕ್ಕೆ ಇನ್ನೂ ಹೆಚ್ಚಿನ ಅವಧಿ ತಗಲುವುದುಂಟು. ವೈದ್ಯಕೀಯ ವರದಿಗಳ ಆಧಾರದ ಮೇಲೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ. ಅವರು ಪೂರ್ತಿ ಫಿಟ್‌ನೆಸ್‌ಗೆ ಮರಳಲು ಬಹಳ ಕಾಲ ಬೇಕಾಗುತ್ತದೆ ಎಂಬುದಾಗಿ ಡಾ| ಖಮರ್‌ ಆಜಂ ಹೇಳಿದರು.

ಕೋಚ್‌ ದೇವೇಂದ್ರ ಶರ್ಮ ಕೂಡ ರಿಷಭ್‌ ಪಂತ್‌ ಕುಟುಂಬಕ್ಕೆ ಇದೇ ಮಾಹಿತಿ ನೀಡಿದ್ದಾರೆ. ಚಿಕಿತ್ಸೆಯ ಪರಿಣಾಮವನ್ನು ಗಮನಿಸಿ, ಪಂತ್‌ ಅವರನ್ನು ಹೊಸದಿಲ್ಲಿ ಅಥವಾ ಮುಂಬಯಿ ಆಸ್ಪತ್ರೆಗೆ ಸ್ಥಳಾಂತರಿಸುವ ಯೋಜನೆ ಇದೆ ಎಂದಿದ್ದಾರೆ.

ಗಣನೀಯ ಸುಧಾರಣೆ
ರಿಷಭ್‌ ಪಂತ್‌ ಆರೋಗ್ಯದಲ್ಲಿ ಗಣನೀಯ ಮಟ್ಟದ ಸುಧಾರಣೆ ಕಂಡುಬಂದಿದೆ ಎಂಬುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ. ಆಸ್ಪತ್ರೆಯಲ್ಲಿ ರಿಷಭ್‌ ಅವರ ತಾಯಿ ಸರೋಜಾ ಪಂತ್‌ ಮತ್ತು ಸಹೋದರಿ ಸಾಕ್ಷಿ ಇದ್ದಾರೆ. ಸಹೋದರನ ಅಪಘಾತದ ಸುದ್ದಿ ಕೇಳಿದ ಸಾಕ್ಷಿ ಲಂಡನ್‌ನಿಂದ ಶನಿವಾರ ಬೆಳಗ್ಗೆ ಧಾವಿಸಿ ಬಂದಿದ್ದರು.

Latest Indian news

Popular Stories