ರೂಪಾ-ರೋಹಿಣಿ ಜಗಳ: ನೊಟೀಸ್ ಜಾರಿ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಸರ್ಕಾರದ ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳು ಹಾದಿರಂಪ ಬೀದಿರಂಪವಾಗಿ ಜಗಳ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಾಮಾನ್ಯ ಮನುಷ್ಯರು ಹಾದಿಮಧ್ಯೆ ಜಗಳ ಮಾಡುವಂತೆ ವಿದ್ಯಾವಂತ ಉನ್ನತ ಅಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಕಿತ್ತಾಡುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಇಬ್ಬರಿಗೂ ನೊಟೀಸ್ ನೀಡಲು ಮುಖ್ಯಮಂತ್ರಿ ಬೊಮ್ಮಾಯಿಯವರು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವರಿಬ್ಬರ ಜಗಳ ನಿನ್ನೆಯಿಂದ ಮಾಧ್ಯಮಗಳಲ್ಲಿ ಬರುತ್ತಿದ್ದು ಹಲವು ವಿಷಯಗಳು ಪ್ರಸ್ತಾಪವಾಗಿದೆ. ವೈಯಕ್ತಿಕವಾಗಿ ಇವರಿಬ್ಬರಿಗೆ ಭಿನ್ನಾಭಿಪ್ರಾಯಗಳಿದ್ದರೆ ಏನಾದರೂ ಮಾಡಿಕೊಳ್ಳಲಿ, ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕಾಗಿತ್ತು. ಆದರೆ ಈ ರೀತಿ ಸಾರ್ವಜನಿಕವಾಗಿ ಕಿತ್ತಾಡಿಕೊಳ್ಳುವುದು ಸರಿಯಲ್ಲ, ಇದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂರುವುದಿಲ್ಲ, ಇಬ್ಬರಿಗೂ ನೊಟೀಸ್ ಜಾರಿ ಮಾಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಆರಂಭದಲ್ಲಿ ನೊಟೀಸ್ ನೀಡುತ್ತೇವೆ, ಆದರೂ ಇವರ ಜಗಳ ಮುಂದುವರಿದರೆ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದರು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಇಬ್ಬರೂ ಮಹಿಳಾ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಆದೇಶ ನೀಡಿದ್ದಾರೆ. 

Latest Indian news

Popular Stories