ರೈತರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಗುರಿ: ಎಂ ಬಿ ಪಾಟೀಲ

ವಿಜಯಪುರ: ದೇಶಕ್ಕೆ ಅನ್ನ ನೀಡುವ ರೈತರನ್ನು ಕೃಷಿ ಉದ್ಯಮಿಗಳನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಕೆ.ಪಿ.ಪಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಬಬಲೇಶ್ವರ ತಾಲೂಕಿನ ಹೆಬ್ಬಾಳಹಟ್ಟಿ, ಅರ್ಜುಣಗಿ, ಹೊಕ್ಕುಂಡಿ, ಯಕ್ಕುಂಡಿ, ನಾಗರಾಳ, ಕುಮಠೆ, ನಿಡೋಣಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ, ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಮತ್ತು ಈ ಭಾಗಕ್ಕೆ ಹೊಸದಾಗಿರುವ ವಾಣಿಜ್ಯ ಬೆಳೆಯ ತಳಿಗಳನ್ನು ರೈತರಿಗೆ ಪರಿಚಯಿಸಲಾಗುವುದು. ಇದಕ್ಕೆ ಪೂರಕವಾಗಿ ರೈತರಿಗೆ ನುರಿತ ಕೃಷಿ, ತೋಟಗಾರಿಕೆ ತಜ್ಞರು ಹಾಗೂ ಪ್ರಗತಿಪರ ರೈತರ ಮಾರ್ಗದರ್ಶನದಲ್ಲಿ ಸೂಕ್ತ ರೀತಿಯ ಸೌಲಭ್ಯ ಒದಗಿಸಲಾಗುವುದು. ಇದರಿಂದ ರೈತರು ಸ್ವಾವಲಂಭಿಯಾಗಿ ಕೃಷಿ ಆದಾಯ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದು ಅವರು ತಿಳಿಸಿದರು.

ಈ ಭಾಗದಲ್ಲಿ ನೀರಾವರಿ ಕಲ್ಪಿಸಿದ್ದರಿಂದ ಈಗ ದ್ರಾಕ್ಷಿ ಮತ್ತು ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಮತ್ತು ಹೆಚ್ಚಿನ ಬೆಲೆ ಸಿಗುವ ರೇಷ್ಮೆ, ಆಲಿವ್, ಸೇಬು, ದಾಳಿಂಬೆ, ಕಿತ್ತಳೆ, ನೆರಳೆ, ಬೀಜ ರಹಿತ ಲಿಂಬೆ, ಹೂವು, ತರಕಾರಿ ಬೆಳೆಯಲು ಹಾಗೂ ಇವುಗಳ ಬೀಜಗಳ ಉತ್ಪಾದನೆ ಮತ್ತು ಮಾರಾಟ ಮಾಡಲು ಇದರಿಂದ ರೈತರಿಗೆ ಅನೂಕುಲವಾಗಲಿದೆ ಎಂದು ಅವರು ಹೇಳಿದರು.

ಮತಕ್ಷೇತ್ರದಲ್ಲಿ ಈಗಾಗಲೇ ಜಲಕ್ರಾಂತಿ ಮಾಡಲಾಗಿದ್ದು, ಕ್ಷೀರ ಕ್ರಾಂತಿ, ಆಹಾರ ಸಂಸ್ಕರಣೆ ಘಟಕ ಸ್ಥಾಪನೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಮಾಡಿ ರೈತರನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸುತ್ತೇವೆ. ಅಷ್ಟೇ ಅಲ್ಲ. ಇಡೀ ದೇಶದ ರೈತರಿಗೆ ಮಾದರಿಯಾಗುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಬಬಲೇಶ್ವರ ಮತ್ತು ತಿಕೋಟಾ ಹೋಬಳಿಗಳು ಅತೀ ಎತ್ತರದಲ್ಲಿರುವುದರಿಂದ ಈ ಭಾಗದ ಗ್ರಾಮಗಳನ್ನು ಯಾವುದೇ ನೀರಾವರಿ ಯೋಜನೆಗಳಡಿ ಸೇರಿಸಿರಲಿಲ್ಲ. ಆದರೆ, 2013-2018ರ ಅವಧಿಯಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿ ಮುಳವಾಡ ಏತ ನೀರಾವರಿ ಯೋಜನೆಯಡಿ ಬಬಲೇಶ್ವರ ಹೋಬಳಿ ಮತ್ತು ತುಬಚಿ – ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ತಿಕೋಟಾ ಹೋಬಳಿಯನ್ನು ಸೇರಿಸಿ ಈ ಭಾಗಕ್ಕೆ ನೀರು ಒದಗಿಸಿದ್ದೇನೆ. ಅಲ್ಲದೇ, ಬಬಲೇಶ್ವರ ಸುತ್ತಮುತ್ತಲಿನ ಇನ್ನುಳಿದ ಗ್ರಾಮಗಳಿಗೆ ಮುಳವಾಡ ಏತ ನೀರಾವರಿ ಯೋಜನೆ ಅಡಿ 5ಎ ಮತ್ತು 5ಬಿ ವಿತರಣಾ ಕಾಲುವೆಯಿಂದ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯೋಜನೆ ಮಂಜೂರಾತಿ ನೀಡಿದ್ದೇನೆ. ಅಷ್ಟೇ ಅಲ್ಲ, ಅರ್ಜುಣಗಿ ಮತ್ತು ಹೆಬ್ಬಾಳಹಟ್ಟಿ ಗ್ರಾಮಗಳ ನೀರಾವರಿಗೆ 15ನೇ ವಿತರಣಾ ಕಾಲುವೆ ಕಾಮಗಾರಿ ಪುನಾರಂಭಕ್ಕೆ ನೀಲ ನಕ್ಷೆ ಮತ್ತು ಅಂದಾಜುಪಟ್ಟಿ ಸಿದ್ದವಾಗಿದೆ. ಇದನ್ನು ನಮ್ಮ ಸರಕಾರ ಅಧಿಕಾರ ಬಂದ ತಕ್ಷಣ ಆದ್ಯತೆ ಮೇರೆಗೆ ಈ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರಿಗೆ ಸಮಪರ್ಕವಾಗಿ ನೀರು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಯಾವ ಯೋಜನೆಗಳು ರೈತರನ್ನು ತಲುಪಿಲ್ಲ. ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ನಾನಾ ಮಾಶಾಸನ ಯೋಜನೆಗಳು ಸ್ಥಗಿತಗೊಂಡಿವೆ. ನಾವು ಅಧಿಕಾರಕ್ಕೆ ಬಂದ ನಂತರ ರೈತರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರ ಕಲ್ಯಾಣಪರ ಯೋಜನೆಗಳನ್ನು ಪುನಾರಂಭಿಸುತ್ತೇವೆ ಎಂದು ಎಂ.ಬಿ.ಪಾಟೀಲ ತಿಳಿಸಿದರು.

Latest Indian news

Popular Stories