ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಆದರೆ ಅನಿರ್ದಿಷ್ಟವಾಗಿ ರಸ್ತೆಗಳನ್ನು ನಿರ್ಬಂಧಿಸುವಂತಿಲ್ಲ: ಸರ್ವೊಚ್ಚ ನ್ಯಾಯಾಲಯ

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ, ಅವರು ರಸ್ತೆಗಳನ್ನು ಅನಿರ್ದಿಷ್ಟ ಕಾಲ ನಿರ್ಬಂಧಿಸುವಂತಿಲ್ಲ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ. ಇದೇ ವೇಳೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಇನ್ನು ಪ್ರಕರಣದಲ್ಲಿ ಕಕ್ಷಿದಾರರಾಗಿರುವ ರೈತ ಸಂಘಗಳಿಗೆ ಈ ಕುರಿತು ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ.

ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೊಬ್ಬರು ಪ್ರತಿಭಟನಾ ನಿರತ ರೈತರ ರಸ್ತೆ ತಡೆಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು. ‘ಸಾರ್ವಜನಿಕ ರಸ್ತೆಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದ್ದರೂ, ಅವುಗಳನ್ನು ಪಾಲಿಸಿಲ್ಲ. ತಾವು ವೈದ್ಯಕೀಯ ಸಮಸ್ಯೆಗಳಿರುವ ಏಕ ಪೋಷಕ ತಾಯಿಯಾಗಿದ್ದು, ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವುದು ದುಃಸ್ವಪ್ನವಾಗಿದೆ ಎಂದು ಅರ್ಜಿದಾರರಾದ ಮೋನಿಕಾ ಅಗರ್‌ವಾಲ್‌ ಹೇಳಿದ್ದಾರೆ.

ರೈತರಿಗೆ ಪ್ರತಿಭಟಿಸುವ ಹಕ್ಕಿದ್ದಂತೆ ಜನರಿಗೆ ರಸ್ತೆಗಳಲ್ಲಿ ಹೋಗುವ ಹಕ್ಕಿದೆ. ಹೀಗಾಗಿ ಅನಿರ್ದಿಷ್ಟವಧಿಗೆ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸರ್ಕಾರ ಸುಗಮ ಸಂಚಾರಕ್ಕಾಗಿ ಸ್ಥಳ ತೆರವುಗೊಳಿಸಲು ರೈತರನ್ನು ವಿನಂತಿಸಲಾಗುತ್ತಿದೆ. ಸುಪ್ರೀಂಕೋರ್ಟ್‌ನ ಹಿಂದಿನ ತೀರ್ಪುಗಳ ಪ್ರಕಾರ ಕಾನೂನು ಬಾಹಿರವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗದು ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ. ಸಮಸ್ಯೆ ಪರಿಶೀಲಿಸಲು ಮತ್ತು ಪರಿಹಾರದೊಂದಿಗೆ ವರದಿ ಸಲ್ಲಿಸಲು ನ್ಯಾಯಾಲಯ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಸಮಯ ನೀಡಿದೆ.

Latest Indian news

Popular Stories

error: Content is protected !!