ರೈತರಿಗೆ 24×7 ಥ್ರಿ ಫೇಸ್ ವಿದ್ಯುತ್ – ಪಂಚಾರತ್ನ ರಥ ಯಾತ್ರೆಯಲ್ಲಿ ಘೋಷಣೆ

ವಿಜಯಪುರ : ರಸ್ತೆ ಅಕ್ಕ- ಪಕ್ಕ ದೊಡ್ಡ ಕಟ್ಟಡಗಳು, ರಸ್ತೆ ಮೇಲೆ ಯಾವುದೋ ದೊಡ್ಡ ಕಾರು ಬಂದರೆ ದೇಶ ಅಭಿವೃದ್ಧಿ ಆಗಿದೆ ಅಂತಾ ಅರ್ಥ ಅಲ್ಲ. ನಿಜವಾದ ಅಭಿವೃದ್ಧಿ ನಿಡೋಣಿ ಅಂತಹ ಉತ್ತರ ಕರ್ನಾಟಕ ಗ್ರಾಮಗಳಲ್ಲಿ ಸರ್ಕಾರ ಶಾಲೆಗಳು ಸೋರುತ್ತಿವೆ, ಮಕ್ಕಳಿಗೆ ಶೌಚಾಲಯ ಇರಲ್ಲ ಇದೆಕ್ಕೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ನನ್ನ ಪಂಚರತ್ನ ಯೋಜನೆಯ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿದರು.

ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಪಂಚರತ್ನ ಯೋಜನೆ ಭವ್ಯ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗ ಬಹಳಷ್ಟು ಹಿಂದುಳಿದಿದೆ. ಹಳ್ಳಿಗಳಲ್ಲಿ ಇನ್ನೂ ಬಯಲು ಶೌಚಾಲವೇ ಗತಿ ಎನ್ನುವಂತಹ ಪರಸ್ಥಿತಿ ಇದೆ. ನಾನು ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಹೆಣ್ಣುಮಕ್ಕಳು – ತಾಯಂದಿಯರು ಶೌಚಾಲಯಕ್ಕೆ ವ್ಯವಸ್ಥೆ ಇಲ್ಲ. ದಯವಿಟ್ಟು ಶೌಚಾಲಯ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು.

ಕನ್ನಡ ಶಾಲೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕನ್ನಡ ಶಾಲೆಗಳಲ್ಲಿಯೇ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎರಡೂ ದೊರೆಯುವಂತೆ ಮಾಡುತ್ತೇನೆ. ಗ್ರಾಮೀಣ ಭಾಗದ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತೇನೆ. ರೈತರ ಹಿತ ಕಾಪಾಡುವ ಯೋಜನೆಗಳು ಪಂಚರತ್ನದಲ್ಲಿ ಅಳವಡಿಸಿಕೊಂಡಿದ್ದೇನೆ. ಬಡವರ, ರೈತರ ಏಳಿಗೆಗಾಗಿ, ಆರೋಗ್ಯ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ನಾಡಿನ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.

ಬೋನ್ಸ್ ನ್ಯಾರೋ, ಕಿಡ್ನಿ ಸಮಸ್ಯೆ ಸೇರಿದಂತೆ ಅನೇಕ ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಹಣವಿಲ್ಲದೆ ರಾಜ್ಯದ ಮೂಲೆ ಮೂಲೆಯಿಂದ ಜನ ನನ್ನ ಬಳಿ ಬರುತ್ತಾರೆ. ನನ್ನ ಕೈಲಾದಷ್ಟು ಸಹಾಯವನ್ನು ನಾನು ಮಾಡುತ್ತಲೇ ಬಂದಿದ್ದೇನೆ. ಬಡವರಿಗೆ ಚಿಕಿತ್ಸೆ ಕೊಡಿಸಲು ಜನತಾ ಸರ್ಕಾರ ಒಂದು ಒಳ್ಳೆಯ ಅರೋಗ್ಯ ಯೋಜನೆ ಜಾರಿಗೆ ತರಲಿದೆ ಎಂದರು.

ಭಾರತ ಜೋಡೋ ಯಾತ್ರೆ: ದೇಶ ತುಕಡಿ ಯಾಗಿತ್ತಾ?
ಶಾಸಕ ಬಂಡೆಪ್ಪ ಕಾಶಂಪುರ ಮಾತನಾಡಿ, ಪ್ರಜಾ ಧ್ವನಿ, ಭಾರತ್ ಜೋಡೋ ಅಂತಾ…ದೇಶ ಏನ್ ತುಕುಡಿ ತುಕುಡಿ ಯಾಗಿತ್ತಾ? ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಕಾರ ಬಂದ್ರೆ ವಿದ್ಯುತ್ ಪ್ರೀ ಅಂತೇ! 5 ವರ್ಷ ಆಡಳಿತದಲ್ಲಿ ಇದ್ರಲ್ಲ ಅವಾಗ್ ಕೊಡಬೇಕಿತ್ತು. ಇವರ ಅಜೆಂಡಾ ಏನು? ರೈತರಿಗೆ ಯಾವುದೇ ಯೋಜನೆ ಇಲ್ಲ. 2000 ರೂಪಾಯಿ ಹೆಣ್ಣುಮಕ್ಕಳಿಗೆ ಕೊಡ್ತೀವಿ ಅಂತಾ ಹೇಳತಿದಿರಿ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಅಲ್ಲಿ ಮೊದಲು 2 ಸಾವಿರ ಕೊಡಿ. ಆಮೇಲೆ ಕರ್ನಾಟಕದಲ್ಲಿ ನಿಮ್ಮ ಸರ್ಕಾರ ಬರುತ್ತೆ. ಅದನ್ನು ಬಿಟ್ಟು ಜನರಿಗೆ ಉದ್ರಿ ಭರವಸೆ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಸ್ತಾನದಲ್ಲಿ ಕಾಂಗ್ರೆಸ್ ಕಥೆ ಮುಗಿದಿದೆ. ಕರ್ನಾಟಕದಲ್ಲೂ ಮುಗಿಯುತ್ತಿದೆ. ನೀವು ಕರ್ನಾಟಕದಲ್ಲಿ ಕೊಡುತ್ತಿರುವ ಭರವಸೆಗಳನ್ನು ರಾಜಸ್ಥಾನದಲ್ಲಿ ಕೊಡಿ. ಒಟ್ಟು 25 ಸಾವಿರ ಕೋಟಿ ಮನ್ನಾ ಮಾಡಿದ್ದೇವೆ. ಹಿಂದೂಸ್ತಾನದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಅವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತನೆ ಎಂದರು.

ಇನ್ನೂ ಕೇವಲ 5 ತಿಂಗಳು ತಡೆಯಿರಿ ನಮ್ಮ ಜನತಾ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ವಿದ್ಯಾವೇತನ 2500 ರೂಪಾಯಿ, ಅಂಗವಿಕಲರಿಗೆ 5 ಸಾವಿರ, ವೃದ್ಧಪ್ಯವೇತನ 5 ಸಾವಿರ ರೂಪಾಯಿ ನೀಡುವ ಯೋಜನೆ ಜಾರಿಗೆ ತರುತ್ತೇವೆ. ಮುಂದೆ ರೈತರ ಸರ್ಕಾರ ಬರಬೇಕು ಅದು ನಮ್ಮ ಜನತಾ ಸರ್ಕಾರ ಅಧಿಕಾರಕ್ಕೆ ಬರಬೇಕು ಆ ನಿಟ್ಟಿನಲ್ಲಿ ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಬಬಲೇಶ್ವರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಮಾತನಾಡಿ, ನಾನು ರೈತರ ಮಗ ನಾನು ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಕೇವಲ ರಾಜಕಾರಣಿಗಳ ಮಕ್ಕಳೇ ಶಾಸಕರಾಗಬೇಕೆ ? ಎಂದು ಪ್ರಶ್ನೆಸಿದರು.

ಕಾಂಗ್ರೆಸ್ ನವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯದಂತೆ ಆಡಳಿತ ನೀಡುತ್ತೇನೆ. ನಿಮ್ಮ ಮತಗಳ ಗೌರವ ಕಡಿಮೆ ಮಾಡುತ್ತಿದ್ದಾರೆ. ನಾನು ಕ್ಷೇತ್ರದಲ್ಲಿ ಅಭ್ಯರ್ಥಿ ಆಗಿದೀನಿ ಒಂದು ಮತಕ್ಕೆ 5 ಸಾವಿರ ಕೊಡುತ್ತಾರೆ. ಹಣ ತೆಗೆದುಕೊಂಡು ನನಗೆ ಆಶೀರ್ವಾದ ಮಾಡಿ. ಕುಮಾರಣ್ಣ ನುಡಿದಂತೆ ನಡೆಯುವ ನಾಯಕ. ನಮ್ಮ ಜನತಾ ಸರ್ಕಾರ ಅಧಿಕಾರಕ್ಕೆ ಬಂದರೆ ದಿನದ 24×7 ತ್ರಿ ಫೇಸ್ ವಿದ್ಯುತ್ ನೀಡುತ್ತೇವೆ. ಗ್ರಾಮೀಣ ಭಾಗದಲ್ಲಿ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ. ಆರೋಗ್ಯ ಸೇವೆ, ವೃದ್ಧಪ್ಯವೇತನ, ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕುಮಾರಣ್ಣ ಹಾಕಿಕೊಂಡಿದ್ದಾರೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡುತ್ತೇನೆ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ ಹಲಸಂಗಿ, ಮಾಜಿ ಶಾಸಕ ಷಹಜಹಾನ್ ದೊಂಗರಗಾಂವ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಶಿವಪ್ಪ ಹೂಗಾರ, ದಿಲಾವರ್ ಖಾಜಿ, ಸೋಮು ಧನಗೊಂಡ, ಅಡಿವೆಪ್ಪ ಅಲ್ಲಿಭಾದಿ, ಹಾಜಿಸಾಹೇಬ್ ಇನಾಮದಾರ, ಲಕ್ಷ್ಮೀಣ್ ಟಕ್ಕಳಕಿ, ನಿಂಗಪ್ಪ ಪೂಜಾರಿ ಸೇರಿದಂತೆ ಅಪಾರ ಪ್ರಮಾಣ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Latest Indian news

Popular Stories