ರೈತ ನಾಯಕ ಕೋಡಿಹಳ್ಳಿ ಚಂದ್ರಶೇಕರ್ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ಮಸಿ ದಾಳಿ: ಪ್ರಕರಣ ದಾಖಲು, 8 ಮಂದಿ ಬಂಧನ

ಬೆಂಗಳೂರು: ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಬಣದ ಸದಸ್ಯರ ಮೇಲೆ ಜೆಡಿಎಸ್ ಕಾರ್ಯಕರ್ತರು ಮಸಿ ಎರಚಿರುವ ಘಟನೆ ಶನಿವಾರ ನಡೆದಿದೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಲು ಬೆಂಗಳೂರಿನ ಪ್ರೆಸ್ ಕ್ಲಬ್’ಗೆ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಮತ್ತಿತರೆ ರೈತ ಮುಖಂಡರು ಆಗಮಿಸಿದ್ದರು. ಈ ವೇಳೆ ಏಕಾಏಕಿ ಜೆಡಿಎಸ್ ಸದಸ್ಯರು ಕೋಡಿಹಳ್ಳಿ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುತ್ತಾ ಮುನ್ನುಗ್ಗಿದರು. ಈ ವೇಳೆ ರೈತ ಸಂಘ ಮತ್ತು ಜೆಡಿಎಸ್ ಸದಸ್ಯರ ನಡುವೆ ತಳ್ಳಾಟ ನಡೆಯಿತು. ಈ ಹಂತದಲ್ಲಿ ರೈತರ ಮೇಲೆ ಕಪ್ಪು ಮಸಿ ಎರಚಲಾಯಿತು.

ಮಾತಿನ ಚಕಮತಿ ವೇಳೆ ರೈತ ಸಂಘದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ದಂಧೆ ನಡೆಸುತ್ತಿದ್ದಾರೆಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದರು.

ಪ್ರತಿಭಟನೆ ಹೆಸರಿನಲ್ಲಿ ಸಾರಿಗೆ ನೌಕರರು ಮುಂದಾದಾಗ ನೇತೃತ್ವ ವಹಿಸಿದ್ದ ಅವರು ಹಣ ಪಡೆದು ಪ್ರತಿಭಟನೆ ಕೈಬಿಟ್ಟಿದ್ದರು. ಈ ಸಂಬಂಧ ಮಾಧ್ಯಗಳಲ್ಲಿ ವರದಿಯಾಗಿದೆ ಎಂದು ಆರೋಪಿಸಿದರು.

ಘಟನೆಯಲ್ಲಿ ಇಬ್ಬರು ರೈತ ಸಂಘದ ಕಾರ್ಯಕರ್ತರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಈ ವರೆಗೂ 8 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

Latest Indian news

Popular Stories