ಕಲಬುರಗಿ: 7.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವಣಿಕ್ಯಾಳ್ ಅವರನ್ನು ಎಸಿಬಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿಗಾಗಿ ಕೆಲಸ ಮಾಡಿದ್ದಕ್ಕಾಗಿ ಬರಬೇಕಿದ್ದ ಬಾಕಿ ಬಿಲ್ ಮೊತ್ತ 7.5 ಲಕ್ಷ ರೂಪಾಯಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಅಧೀನ ಸಿಬ್ಬಂದಿ ಮೂಲಕ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಹಿರಿಯ ಕೆಎಎಸ್ ಅಧಿಕಾರಿಯನ್ನು ಇಂದು ರಾತ್ರಿ ಬಂಧಿಸಿದ್ದಾರೆ.
ಆಯುಕ್ತರ ಪರವಾಗಿ 1.42 ಲಕ್ಷ ರೂಪಾಯಿ ಲಂಚ ಪಡೆದಿದ್ದ ವಿಷಯ ನಿರ್ವಾಹಕ ಚನ್ನಪ್ಪ ಬನ್ನೂರ ಅವರನ್ನೂ ಎಸಿಬಿ ಬಂಧಿಸಿದೆ.
ಶಂಕರಣ್ಣ ವಣಿಕ್ಯಾಳ್ ಅವರು ಕೋವಿಡ್ ಸುರಕ್ಷಾ ಸಹಾಯವಾಣಿಗಾಗಿ ಮಹಾನಗರ ಪಾಲಿಕೆಯು ಶರಣಬಸಪ್ಪ ಅಂಬೆಸಿಂಗ್ ಎಂಬುವವರ ಕಂಪನಿಯ ನೆರವನ್ನು ಪಡೆದಿತ್ತು. ಆ ಸೇವೆಗಾಗಿ ನೀಡಬೇಕಿದ್ದ 7.5 ಲಕ್ಷ ರೂಪಾಯಿ ಬಿಲ್‌ಗೆ ಅನುಮೋದನೆ ನೀಡಬೇಕು ಎಂದರೆ ಶೇ. 2ರಷ್ಟು ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಶರಣಬಸಪ್ಪ ಅವರು ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ವಿಷಯ ನಿರ್ವಾಹಕ ಚನ್ನಪ್ಪಗೆ ಲಂಚದ ಹಣ ನೀಡುವ ಸಂದರ್ಭದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಯುಕ್ತ ಶಂಕರಣ್ಣ ವಣಿಕ್ಯಾಳ ಪರವಾಗಿಯೇ ಹಣ ಪಡೆಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.