ಲೋಕಾಯುಕ್ತರಾಗಿ ನ್ಯಾ. ಬಿ.ಎಸ್. ಪಾಟೀಲ್ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ನೂತನ ಲೋಕಾಯುಕ್ತರಾಗಿ ನ್ಯಾ. ಬಿ.ಎಸ್. ಪಾಟೀಲ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಗರದ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆದಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ವಿ. ಸೋಮಣ್ಣ, ಹಾಲಪ್ಪ ಆಚಾರ್ ಮತ್ತು ಶಾಸಕರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಫಾರಸು ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ವಿಧಾನ ಪರಿಷತ್ತಿನ ಸಭಾಪತಿ, ವಿಧಾನಸಭೆಯ ಸ್ಪೀಕರ್‌ ಹಾಗೂ ಉಭಯ ಸದನಗಳ ಪ್ರತಿಪಕ್ಷ ನಾಯಕರ ಶಿಫಾರಸುಗಳನ್ನು ಸಮಾಲೋಚಿಸಿ ನ್ಯಾ. ಬಿ.ಎಸ್‌. ಪಾಟೀಲ್‌ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಆದೇಶ ಹೊರಡಿಸಿದ್ದರು.

ಈ ವರ್ಷದ ಜನವರಿಯಲ್ಲಿ ನ್ಯಾ. ವಿಶ್ವನಾಥ್‌ ಶೆಟ್ಟಿ ಅವರ ನಿವೃತ್ತಿಯಿಂದ ಲೋಕಾಯುಕ್ತ ಹುದ್ದೆ ತೆರವಾಗಿತ್ತು. 5 ತಿಂಗಳ ಬಳಿಕ ಈಗ ಸರ್ಕಾರ ಹಾಲಿ ಉಪಲೋಕಾಯುಕ್ತ-1 ಆಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾ.ಪಾಟೀಲ್‌ರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Latest Indian news

Popular Stories