ವನಿತಾ ಪ್ರೀಮಿಯರ್‌ ಲೀಗ್‌ ಕ್ರಿಕೆಟಿಗರ ಹರಾಜು: ಸ್ಮೃತಿ ಮಂಧನಾಗೆ ಅತ್ಯಧಿಕ ಧನ

ಮುಂಬಯಿ: ತೀವ್ರ ಕುತೂಹಲ ಮೂಡಿಸಿದ ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟಿಗರ ಹರಾಜು ಪ್ರಕ್ರಿಯೆಯಲ್ಲಿ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧನಾ ಅತ್ಯಧಿಕ 3.4 ಕೋಟಿ ರೂ. ಮೊತ್ತಕ್ಕೆ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಪಾಲಾಗುವ ಮೂಲಕ ದಾಖಲೆ ನಿರ್ಮಿಸಿದರು.

ಇದೇ ವೇಳೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕಡಿಮೆ ಮೊತ್ತಕ್ಕೆ ಮಾರಾಟಗೊಂಡು ಅಚ್ಚರಿಗೆ ಕಾರಣರಾದರು. ಇವರನ್ನು 1.80 ಕೋಟಿ ರೂ. ನೀಡಿ ಮುಂಬೈ ಇಂಡಿಯನ್ಸ್‌ ಖರೀದಿಸಿತು. ಭಾರತದ ಅಗ್ರ 6 ಮಂದಿಯ ಆಟಗಾರ್ತಿಯರ ಯಾದಿಯಲ್ಲೂ ಕೌರ್‌ ಕಾಣಿಸಿಕೊಳ್ಳಲಿಲ್ಲ. ಭಾರತೀಯರ ಗರಿಷ್ಠ ಮೊತ್ತದ ಯಾದಿಯಲ್ಲಿ ಇವರಿಗೆ ಲಭಿಸಿದ್ದು 7ನೇ ಸ್ಥಾನ.


ಸೋಮವಾರದ ಹರಾಜಿನಲ್ಲಿ ಒಟ್ಟು 20 ಮಂದಿ ಕೋಟಿ ರೂ. ಮೊತ್ತಕ್ಕೆ ವಿವಿಧ ತಂಡಗಳನ್ನು ಸೇರಿಕೊಂಡರು. ಇದರಲ್ಲಿ ಸರ್ವಾಧಿಕ 10 ಆಟಗಾರ್ತಿಯರು ಭಾರತೀಯರೇ ಆಗಿದ್ದರು.
ಸ್ಮತಿ ಮಂಧನಾ ಸೇರಿದಂತೆ ಮೂವರು 3 ಕೋಟಿ ರೂ. ಮೊತ್ತದ ಗಡಿ ದಾಟಿದರು. ಉಳಿದಿಬ್ಬರೆಂದರೆ ಆಸ್ಟ್ರೇಲಿಯದ ಆ್ಯಶ್ಲಿ ಗಾರ್ಡನರ್‌ ಮತ್ತು ಇಂಗ್ಲೆಂಡ್‌ನ‌ ನಥಾಲಿ ಸ್ಕಿವರ್‌. ಇಬ್ಬರೂ ತಲಾ 3.2 ಕೋಟಿ ರೂ.ಗೆ ಮಾರಾಟಗೊಂಡರು. ಕ್ರಮವಾಗಿ ಗುಜರಾತ್‌ ಮತ್ತು ಮುಂಬೈ ತಂಡವನ್ನು ಸೇರಿಕೊಂಡರು. ಇವರಿಬ್ಬರೂ ಅತೀ ಹೆಚ್ಚಿನ ಬೆಲೆಯ ವಿದೇಶಿ ಕ್ರಿಕೆಟಿಗರಾಗಿದ್ದಾರೆ.

ಮಂಧನಾಗೆ ಅಗ್ರಸ್ಥಾನ
ಹರಾಜು ಪ್ರಕ್ರಿಯೆಯ ಮೊದಲ ಹೆಸರೇ ಸ್ಮತಿ ಮಂಧನಾ ಅವರದಾಗಿತ್ತು. ಇವರಿಗಾಗಿ ಆರ್‌ಸಿಬಿ ಮತ್ತು ಮುಂಬೈ ತೀವ್ರ ಪೈಪೋಟಿ ನಡೆಸಿದವು. ಅಂತಿಮವಾಗಿ ಆರ್‌ಸಿಬಿ ಕೈ ಮೇಲಾಯಿತು. ಮೊದಲ ಬಿಡ್‌ನ‌ಲ್ಲೇ ಮಂಧನಾಗೆ ಲಭಿಸಿದ ಈ ದೊಡ್ಡ ಮೊತ್ತವನ್ನು ಮೀರಲು ಬೇರೆ ಯಾರಿಂದಲೂ ಸಾಧ್ಯವಾಗಲಿಲ್ಲ ಎಂಬುದು ಈ ಹರಾಜಿನ ವೈಶಿಷ್ಟéವೆನಿಸಿತು.
ಸ್ಟಾರ್‌ ಆಟಗಾರ್ತಿಯರಿಗೆ ಬಲೆ ಬೀಸಲು ಹೊರಟಿದ್ದ ಆರ್‌ಸಿಬಿ ತನ್ನ ಪರ್ಸ್‌ನಲ್ಲಿ 12 ಕೋ.ರೂ. ಇರಿಸಿಕೊಂಡಿತ್ತು. ಮೊದಲ 4 ಖರೀದಿಗೇ 7.10 ಕೋ.ರೂ. ವ್ಯಯ ಮಾಡಿತು. ರಿಚಾ ಘೋಷ್‌, ಎಲ್ಲಿಸ್‌ ಪೆರ್ರಿ, ರೇಣುಕಾ ಸಿಂಗ್‌ ಆರ್‌ಸಿಬಿ ಪಾಲಾದ ಉಳಿದ ಪ್ರಮುಖರು. ಇವರೆಲ್ಲರೂ ಕೋಟಿ ಮೊತ್ತದ ಗಡಿ ದಾಟಿದವರು ಎಂಬುದನ್ನು ಮರೆಯುವಂತಿಲ್ಲ.
ಶ್ರೀಲಂಕಾ ತಂಡದ ನಾಯಕಿ ಚಾಮರಿ ಅತಪಟ್ಟು, ಇಂಗ್ಲೆಂಡ್‌ ನಾಯಕಿ ಹೀತರ್‌ ನೈಟ್‌, ದಕ್ಷಿಣ ಆಫ್ರಿಕಾದ ಬ್ಯಾಟರ್‌ ಲಾರಾ ವೋಲ್ವಾರ್ಟ್‌ ಅವರೆಲ್ಲ ಮೊದಲ ಸುತ್ತಿನಲ್ಲಿ ಹರಾಜಾಗದೇ ಉಳಿದದ್ದು ಮತ್ತೂಂದು ಅಚ್ಚರಿ ಎನಿಸಿತು.

ನಮಸ್ಕಾರ ಬೆಂಗಳೂರು!
ಹೀಗೆಂದು ಟ್ವೀಟ್‌ ಮಾಡಿದವರು ಬೇರೆ ಯಾರೂ ಅಲ್ಲ, ಸೋಮವಾರದ ಬಿಡ್‌ನ‌ಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಆರ್‌ಸಿಬಿ ಪಾಲಾದ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ.


“ನಮಸ್ಕಾರ ಬೆಂಗಳೂರು! ಆರ್‌ಸಿಬಿಯನ್ನು ಸೇರಿದ್ದಕ್ಕೆ ಖುಷಿಯಾಗುತ್ತಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿ ಇದಾಗಿದೆ’ ಎಂಬುದಾಗಿ ಮಂಧನಾ ಟ್ವೀಟ್‌ ಮೂಲಕ ಸಂಭ್ರಮವನ್ನಾಚರಿಸಿದರು.

Latest Indian news

Popular Stories