ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಜುಲೈ 26ರವರೆಗೆ ಸಮೀಕ್ಷೆ ನಡೆಸದಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಲಾಗಿದೆ. ಬುಧವಾರ ಸಂಜೆ 5 ಗಂಟೆವರೆಗೆ ಮಸೀದಿ ಸರ್ವೆಗೆ ಸುಪ್ರೀಂ ತಡೆ ನೀಡಿದೆ. ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಮಸೀದಿ ಕಮಿಟಿಗೆ ಸೂಚನೆ ನೀಡಲಾಗಿದೆ.
ಯಾವುದೇ ಉತ್ಖನನವಿಲ್ಲದೆ ಜ್ಞಾನವಾಪಿ ಮಸೀದಿ(Gyanvapi Mosque)ಯ ಸಮೀಕ್ಷೆ ನಡೆಸಲು ಎಎಸ್ಐಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ಗೆ ತೆರಳಲು ಮಸೀದಿ ಸಮಿತಿಗೆ ಜುಲೈ 26ರವರೆಗೆ ಕಾಲಾವಕಾಶ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಅಲ್ಲಿಯವರೆಗೆ ಸ್ಥಳದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ಸಮೀಕ್ಷೆಯು ಮಸೀದಿಯ ರಚನೆಯನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರ ಈಗಾಗಲೇ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, ಪ್ರಸ್ತುತ ಅಳತೆ, ಛಾಯಾಗ್ರಹಣ ಮತ್ತು ರಾಡಾರ್ ಅಧ್ಯಯನಗಳನ್ನು ಮಾತ್ರ ನಡೆಸಲಾಗುತ್ತಿದೆ ಎಂದು ಹೇಳಿದರು.
ಭಾರತೀಯ ಪುರಾತತ್ವ ಇಲಾಖೆಯು ಕಾಶಿಯ ಜ್ಞಾನವಾಪಿ(Gyanvapi) ಮಸೀದಿಯ ಸಮೀಕ್ಷೆಯನ್ನು ಇಂದು(ಸೋಮವಾರ) ಆರಂಭಿಸಿದೆ. ಅಯೋಧ್ಯೆ(Ayodhya)ಯ ರಾಮಜನ್ಮ ಭೂಮಿಯ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಪರಿಹರಿಸಲಾಗಿದ್ದು, ಪ್ರಕರಣ ಅಂತ್ಯಗೊಂಡು ಇದೀಗ ರಾಮಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.