ವಿಜಯಪುರದಲ್ಲಿ ಶಾಂತಿಯುತ ಮತದಾನ

ವಿಜಯಪುರ : ಮಸಬಿನಾಳದಲ್ಲಿ ಮತಯಂತ್ರಗಳ ಸಾಗಾಟ ಮಾಡಲಾಗುತ್ತಿದೆ ಎಂಬ ತಪ್ಪು ಕಲ್ಪನೆಯೊಂದಿಗೆ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ, ವಿಜಯಪುರ ನಗರದಲ್ಲಿ ಅಕ್ರಮ ಮತದಾರರಿಗೆ ಘೇರಾವ್ ಘಟನೆ ಹೊರತುಪಡಿಸಿ ವಿಜಯಪುರ ಜಿಲ್ಲೆಯಾದ್ಯಂತ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 2078 ಮತಗಟ್ಟೆಗಳಲ್ಲಿ ಬುಧವಾರ ಶಾಂತಿಯುತ ಹಾಗೂ ಸೂಸೂತ್ರವಾಗಿ ಮತದಾನ ನಡೆಯಿತು.

IMG 20230510 WA0131 Featured Story, Vijayapura

ಎಂಟು ವಿಧಾನಸಭಾ ಕ್ಷೇತ್ರದ ಮತದಾರರು 95 ಜನ ಅಭ್ಯರ್ಥಿಗಳ ಭವಿಷ್ಯವನ್ನು ಬರೆದು ಮತಯಂತ್ರಗಳಲ್ಲಿ ಭದ್ರ ಮಾಡಿದರು. ಬೆಳಿಗ್ಗೆಯಿಂದಲೇ ಉತ್ಸಾಹದ ಮತದಾನ ಕಂಡು ಬಂದಿತು.

ಸಾಂಪ್ರದಾಯಿಕ ಸರತಿ ಸಾಲು ಎಲ್ಲೆಡೆ ಗೋಚರಿಸಿತು. ಪ್ರತಿಯೊಂದು ಮತದಾನ ಕೇಂದ್ರದ ಮುಂಭಾಗದಲ್ಲಿ ಕಣ್ಣು ಹಾಯಿಸಿದರೂ ಕರ್ಯಕರ್ತರ ದಂಡು, ಟೇಬಲ್ ಹಾಕಿಕೊಂಡು ಮತದಾರರ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ ಹುಡುಕಿ ಕೊಡುತ್ತಿರುವವರ ದಂಡು ಗೋಚರಿಸಿತು.

ಆಧುನಿಕ ತಂತ್ರಜ್ಞಾನ ಆಧರಿಸಿ ಹೆಸರು, ಎಪಿಕ್ ಸಂಖ್ಯೆ ಹೇಳಿದರೆ ನಿಮ್ಮ ಕ್ರಮ ಸಂಖ್ಯೆ, ಭೂತಸಂಖ್ಯೆ ಎಂಬಿತ್ಯಾದಿ ವಿವರವುಳ್ಳ ಸಣ್ಣ ಫ್ರಿಂಟ್ ಔಟ್ ಸಿಗುವ ವ್ಯವಸ್ಥೆಯನ್ನು ಅನೇಕ ರಾಜಕೀಯ ಪಕ್ಷಗಳು ಮಾಡಿದ್ದವು. ನಿಷೇದಾಜ್ಞೆ ಹಿನ್ನೆಲೆಯಲ್ಲಿ ಅಣತಿ ದೂರದಲ್ಲಿಯೇ ತಂಡವೊಂದು ಟೇಬಲ್ ಹಾಕಿಕೊಂಡು ಈ ಕರ್ಯದಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆ ಗೋಚರಿಸಿತು.

ಮಸಬಿನಾಳದಲ್ಲಿ ಮತಯಂತ್ರಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ತಪ್ಪು ಪರಿಭಾವಿಸಿದ ಗ್ರಾಮಸ್ಥರು ಅಧೀಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆಯಿತು. ಈ ಕಾರಣದಿಂದಾಗಿ ಕೆಲಕಾಲ ಮತದಾನ ಸಹ ಸ್ಥಗಿತವಾಗಿತ್ತು.

ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ವೋಟ್ ಮಾಡುವ ವ್ಯವಸ್ಥೆ ಮಾಡಲಾಗಿದ್ದರೂ ಸಹ ಅನೇಕ ಹಿರಿಯರು ಮತಗಟ್ಟೆಗೆಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಹಿರಿಯ ನಾಗರಿಕರು ಅತ್ಯಂತ ಉತ್ಸಾಹ ಭರಿತರಾಗಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಅನೇಕ ಆರೋಗ್ಯ ಸಮಸ್ಯೆಗಳ ಮಧ್ಯೆಯೂ ಕುಟುಂಬಸ್ಥರ ಸಹಾಯ ಪಡೆದು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಯುವಕರಿಗೆ ಮತದಾನ ಮಾಡುವ ಸ್ಪೂರ್ತಿಯನ್ನು ಅನೇಕ ಹಿರಿಯರು ತುಂಬಿದ್ದು ಗಮನ ಸೆಳೆಯಿತು.

ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 94 ವರ್ಷದ ವಯೋವೃದ್ಧೆ ಬಸಲಿಂಗವ್ವ ಬಿರಾದಾರ ತಮ್ಮ ಮೊಮ್ಮಗನ ನೆರವಿನೊಂದಿಗೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದರೆ, ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮಲ್ಲಪ್ಪ ಗುರಪ್ಪ ಕತ್ನಳ್ಳಿ ತ್ರಿಚಕ್ರ ವಾಹನದಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಅಥರ್ಗಾದಲ್ಲಿ 85 ವರ್ಷದ ವಯೋವೃದ್ಧ ಹುಚ್ಚಪ್ಪ ವಠಾರ ಅವರನ್ನು ಸಂಬಂಧಿಕರು ಹೊತ್ತುಕೊಂಡು ಬಂದು ಮತದಾನಕ್ಕೆ ನೆರವಾಗಿದ್ದು ವಿಶೇಷವಾಗಿತ್ತು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಓ ರಾಹುಲ್ ಶಿಂಧೆ, ಚುನಾವಣೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳು ಸಹ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ವಿಶೇಷಚೇತನ ಮತದಾರರಿಗೆ ಹಾಗೂ ಆರೋಗ್ಯ ಸಮಸ್ಯೆ ಎದುರಿಸುವ ಮತದಾರರಿಗೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಲು ಅನುಕೂಲವಾಗಲು ಎಲ್ಲ ಮತದಾನ ಕೇಂದ್ರಗಳಲ್ಲಿಯೂ ಭೂತ್ ಸಂಖ್ಯೆಗನುಗುಣವಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.

ಆಟೋ ಮೊದಲಾದ ವಾಹನಗಳಲ್ಲಿ ಆಗಮಿಸುವ ಹಿರಿಯ ನಾಯಕರನ್ನು ವ್ಹೀಲ್ ಚೇರ್ ಮೂಲಕ ಭೂತ್‌ಗೆ ಕರೆತರುವ ದೃಶ್ಯ ಎಲ್ಲೆಡೆ ಕಂಡು ಬಂಧಿತು.

ಪ್ರತಿ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬಂದಿತು. ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರ ಸಜ್ಜಿತ ಪ್ಯಾರಾ ಮಿಲಟರಿ ಪಡೆಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಹಾಗು ಹೋಂ ಗಾರ್ಡ ಸಿಬ್ಬಂದಿ ಸಹ ಇದ್ದರು.

ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಪೆಟ್ರೋಲಿಂಗ್ ವಾಹನಗಳ ಮೂಲಕ ಭೂತ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸುರಕ್ಷತೆಗಳನ್ನು ಪರಿಶೀಲನೆ ನಡೆಸಿದರು. ಅನೇಕ ಹಿರಿಯ ಅಧಿಕಾರಿಗಳು ಭೂತ್‌ನಲ್ಲಿಯೇ ಇದ್ದುಕೊಂಡು ಸುರಕ್ಷತೆಯ ಮೇಲುಸ್ತುವಾರಿ ವಹಿಸಿದ್ದು ಕಂಡು ಬಂದಿತು.

Latest Indian news

Popular Stories