ವಿಟ್ಲ ಜಾತ್ರೆಯಲ್ಲಿ ವ್ಯಾಪಾರಿಗಳ ಮೇಲೆ ಹಲ್ಲೆ ಪ್ರಕರಣ; ಆರೋಪಿಗಳ ಬಂಧನ

ವಿಟ್ಲ: ವಿಟ್ಲ ಜಾತ್ರೋತ್ಸವದಲ್ಲಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಲ್ಲೆ ಪ್ರಕರಣದಲ್ಲಿ ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಯುವಕರ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಗಣೇಶ್‌ ಕಡಂಬುನನ್ನು ಈಗಾಗಲೇ ಬಂಧಿಸಲಾಗಿತ್ತು. ಇನ್ನೋರ್ವ ಪ್ರಮುಖ ಆರೋಪಿ ಮಂಜುನಾಥ್‌ ಕೇರಳ ಭಾಗದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಮೂರನೇ ಆರೋಪಿ ಹರ್ಷಿತ್‌ ಎಂಬುವನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಆರೋಪಿಯು ಈ ಹಿಂದೆ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿದ್ದ ವ್ಯಕ್ತಿಗೆ ಆರು ಮಂದಿ ಆರೋಪಿಗಳು ಹಲ್ಲೆ ನಡೆಸಿದ್ದರು. ರಾತ್ರಿ 12.30ಕ್ಕೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಯುವಕರು ಬಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ದೂರು ನೀಡಲಾಗಿತ್ತು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Latest Indian news

Popular Stories