ವಿದ್ಯಾರ್ಥಿನಿಯರಿಗೆ ಹಿಜಾಬ್ ನಿಷೇಧ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್’ಗೆ ಹೀನಾಯ ಸೋಲು

ಕರ್ನಾಟಕ ಚುನಾವಣೆ 2023 ರ ಚುನಾವಣೆಯಲ್ಲಿ ಕರ್ನಾಟಕದ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತುಮಕೂರಿನ ತಿಪಟೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ವಿರುದ್ಧ ಸೋಲು ಕಂಡಿದ್ದಾರೆ.

ಶಿಕ್ಷಣ ಸಚಿವರಾಗಿದ್ದ ನಾಗೇಶ್ ಅವರು ಶಾಲೆಯಲ್ಲಿ ಹಿಜಾಬ್ ಧರಿಸುವ ಮುಸ್ಲಿಂ ಯುವತಿಯರ ವಿರುದ್ಧ ನಿಲುವು ತಳೆದಾಗ ರಾಜ್ಯ ಸರ್ಕಾರದ ಮುಖವಾಗಿದ್ದರು. ಪಠ್ಯಪುಸ್ತಕಗಳ ಕೇಸರಿಕರಣದ ಹಿಂದಿನ ಪ್ರಮುಖ ಶಕ್ತಿಯೂ ಆಗಿದ್ದರು ಮತ್ತು ಪ್ರತಿಪಕ್ಷಗಳು, ಕನ್ನಡ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಭಾರೀ ಟೀಕೆಗಳಿಗೆ ಗುರಿಯಾಗಿದ್ದರು. ಸಂಘ ಪರಿವಾರದ ಹಿನ್ನಲೆಯ ಬಿಸಿ ನಾಗೇಶ್ ಸೋತು ಮನೆ ಸೇರಬೇಕಾಗಿದೆ.

ಕಾಂಗ್ರೆಸ್ ಪಕ್ಷದ ಷಡಕ್ಷರಿ ಅವರು 17,652 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. INC ಅಭ್ಯರ್ಥಿಯು 71,999 ಮತ ಪಡೆದರೆ ಬಿಸಿ ನಾಗೇಶ್ 54,347 ಪಡೆದರು.

ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಸಂಸ್ಥೆಗಳಲ್ಲಿ (PUC) ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸುವಲ್ಲಿ ನಾಗೇಶ್ ಪ್ರಮುಖರಾಗಿದ್ದರು. ರಾಜ್ಯದ ಪಿಯುಸಿ ಪರೀಕ್ಷೆಯ ಸಮಯದಲ್ಲೂ ಅವರು ಹಿಜಾಬ್ ಧರಿಸುವ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿರಲಿಲ್ಲ.

2021ರ ಡಿಸೆಂಬರ್‌ನಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ತರಗತಿಗೆ ಬರದಂತೆ ನಿರ್ಬಂಧ ಹೇರಿದಾಗ ಹಿಜಾಬ್ ವಿವಾದ ಉತ್ತುಂಗಕ್ಕೇರಿತು. ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಾಂವಿಧಾನಿಕವಾಗಿ ನೀಡಿರುವ ಹಕ್ಕನ್ನು ಚಲಾಯಿಸಲು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಮತ್ತು ಅಂತಿಮವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Latest Indian news

Popular Stories