ವಿದ್ಯಾರ್ಥಿ ಸಂಘಟನೆಗಳ ಮುಖಂಡರೊಂದಿಗೆ ಎಸ್.ಐ.ಓ ‘ಈದ್ ಸೌಹಾರ್ದ ಕೂಟ’

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‌.ಐ.ಓ) ಕರ್ನಾಟಕ ಘಟಕದ ವತಿಯಿಂದ ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರೊಂದಿಗೆ ‘ಈದ್ ಸೌಹಾರ್ದ ಕೂಟ’ (ಈದ್ ಗೆಟ್‌ ಟುಗೆದರ್) ಕಾರ್ಯಕ್ರಮವನ್ನು ಭಾನುವಾರದಂದು ಸಂಜೆ ಬೆಂಗಳೂರಿನಲ್ಲಿ ನಡೆಯಿತು.

IMG 20220516 WA0020 Featured Story, Education

ಕ್ವೀನ್ಸ್ ರಸ್ತೆಯಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದತ್ತಾಂಶ ಗೌಪ್ಯತೆ’ ಯ ವಿಷಯವಾಗಿ ವಿಚಾರ ವಿನಿಮಯ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದತ್ತಾಂಶ ತಂತ್ರಜ್ಞ ಅನಿವಾರ್ ಎ ಅರವಿಂದ್, ಡಿಜಿಟಲ್ ತಂತ್ರಜ್ಞಾನದ ಪ್ರಯೋಜನ ಅರಿತಿದ್ದರಿಂದ ಇಂದು ಹೆಚ್ಚು ಜನರು ಬಳಸುತ್ತಿದ್ದಾರೆ. ಆದರೆ ತಂತ್ರಜ್ಞಾನದ ಗೌಪ್ಯತೆಗೆ ಸಂಬಂಧಿಸಿ ಹಲವು ಅಂಶಗಳು ಬಹಳಷ್ಟು ನೈತಿಕ ಪ್ರಶ್ನೆಗಳನ್ನು ಹುಟ್ಟು ಹಾಕಿವೆ ಎಂದು ಹೇಳಿದರು.

ಮೊಬೈಲ್ ಅಪ್ಲಿಕೇಶನ್‌ಗಳು, ವಿಭಿನ್ನ ಸಾಫ್ಟ್‌ವೇರ್‌ಗಳನ್ನು ನಿರ್ದಿಷ್ಟವಾಗಿ ಬಳಸುವವರು ಅವುಗಳ ಹಿನ್ನೆಲೆ, ಉದ್ದೇಶ ಗಳನ್ನು ಕೂಡ ಅರಿತಿರಬೇಕು. ದತ್ತಾಂಶ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ನಮ್ಮ ದೇಶದಲ್ಲಿ ಇನ್ನೂ ಕೂಡ ಕಾನೂನು ಚೌಕಟ್ಟು ರೂಪಿಸಲಾಗಿಲ್ಲ. ಇದರಿಂದ ತಮ್ಮ ದತ್ತಾಂಶಗಳು ಸೋರಿಕೆಯಾಗುತ್ತಿದೆ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಇದು ಕಳವಳಕ್ಕೂ ಕಾರಣವಾಗಿದೆ. ಆದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ಸರ್ಕಾರ ಸರಿಯಾದ ನಿಯಮಗಳನ್ನು ರೂಪಿಸಬೇಕು ಎಂದರು.

ಅಧ್ಯಕ್ಷ್ಯತೆ ವಹಿಸಿ ಮಾತನಾಡಿದ ಎಸ್.ಐ.ಓ ಕರ್ನಾಟಕದ ರಾಜ್ಯಾಧ್ಯಕ್ಷ ಶೆಹಝಾದ್ ಶಕೀಬ್, ತಂತ್ರಜ್ಞಾನ ಇಂದು ಬಹಳಷ್ಟು ಮುಂದುವರಿದಿದೆ. ಅದನ್ನು ಬಳಸುವವರಿಗೂ ಕೂಡ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಕಲ್ಪಿಸಬೇಕು. ಇಂದು ಇದೇ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಂಡು ದೇಶದ ಐಕ್ಯತೆಯನ್ನು ಒಡೆಯುವ ಷಡ್ಯಂತ್ರ ಜಾರಿಯಲ್ಲಿದೆ, ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದಿರುವ ನಮ್ಮ ದೇಶದ ಸೌಂದರ್ಯವನ್ನು ಹಾಳುಗೆಡವಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ.‌ ಈ ಹಿನ್ನೆಲೆಯಲ್ಲಿ ಈದ್ ನಂತಹ ಹಬ್ಬಗಳು ನಮ್ಮ ನಡುವಿನ ಸಹೋದರ ಬಾಂಧವ್ಯಕ್ಕೆ ಕೊಂಡಿಯಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬೆಂಗಳೂರು ನಗರಾಧ್ಯಕ್ಷ ಹಾರೂನ್ ಸಫ್ದಾರ್ ಭಾಗವಹಿಸಿ ಈದ್-ಉಲ್-ಫಿತರ್ ಹಬ್ಬದ ಸಂದೇಶವನ್ನು ನೀಡಿ ಶುಭಾಶಯ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಪ್ರಸ್ತುತ ಕಾಲಘಟ್ಟದಲ್ಲಿ ಈ ರೀತಿಯ ಕಾರ್ಯಕ್ರಮಗಳು ದೇಶ ಸೌಹಾರ್ದ ಪರಂಪರೆಯನ್ನು ಬಲಿಷ್ಠ ಗೊಳಿಸುವ ಜೊತೆಗೆ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಟ್ಟಾಗಿ ಸೇರುವ ಮೂಲಕ ಕೂಡಿ ಬಾಳುವ ಸಂಸ್ಕೃತಿಯನ್ನು ಇನ್ನಷ್ಟೂ ಗಟ್ಟಿಗೊಳಿಸಬಹುದು ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.

Latest Indian news

Popular Stories