ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ ನಿನ್ನೆ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯನ್ನು ನಿರಾಕರಿಸಿರುವ ದೂರುದಾರು ಮಹಿಳೆ, ತಾನೇ ಮೂತ್ರ ವಿಸರ್ಜನೆ ಮಾಡಿರುವ ಸಾಧ್ಯತೆಯಿರುವುದಾಗಿ ಹೇಳಿರುವುದು ಸಂಪೂರ್ಣ ಸುಳ್ಳು ಮತ್ತು ಹುಸಿಯಾಗಿದ್ದು, ಸಹಜವಾಗಿ ಅವಹೇಳನಕಾರಿಯಾಗಿದೆ ಎಂದು ಆರೋಪಿಸಿದ್ದಾರೆ.
ಕಸ್ಟಡಿ ವಿಚಾರಣೆ ನಿರಾಕರಿಸಿ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯ ನೀಡಿದ ಆದೇಶ ಪರಿಷ್ಕರಿಸಲು ಕೋರಲಾಗಿದ್ದ ಪೊಲೀಸ್ ಅರ್ಜಿಯ ವಿರುದ್ಧ ಶುಕ್ರವಾರ ವಾದ ಮಂಡಿಸಿದ ಮಿಶ್ರಾ ಪರ ವಕೀಲರು, ತಮ್ಮ ಕಕ್ಷಿದಾರ ಅಪರಾಧ ಮಾಡಿಲ್ಲ, ದೂರುದಾರ ಮಹಿಳೆಯೇ ಮೂತ್ರ ವಿಸರ್ಜನೆ ಮಾಡಿರುವುದಾಗಿ ಹೇಳಿದ್ದರು.
ಆರೋಪಿ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಹುಸಿಯಾಗಿದ್ದು, ಸ್ವಭಾವತ:ವಾಗಿ ಅವಹೇಳನಕಾರಿಯಾಗಿದೆ. ಹೇಳಲಾದ ಆರೋಪಗಳು ಸಂಪೂರ್ಣ ವಿರೋಧಾಭಾಸದಿಂದ ಕೂಡಿವೆ ಎಂದು ದೂರುದಾರ ಮಹಿಳೆ ಪರ ವಕೀಲ ಅಂಕೂರ್ ಮಹೀಂದ್ರೋ ಹೇಳಿದ್ದಾರೆ.
ಆರೋಪಿ ತಾನು ಮಾಡಿರುವ ಅಸಹ್ಯಕರ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡುವ ಬದಲು, ದೂರುದಾರ ಮಹಿಳೆಗೆ ಮತ್ತಷ್ಟು ಕಿರುಕುಳ ನೀಡುವ ಉದ್ದೇಶದಿಂದ ತಪ್ಪು ಮಾಹಿತಿ ಮತ್ತು ಸುಳ್ಳುಗಳನ್ನು ಹೇಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಹಲವಾರು ಕಥಕ್ ನೃತ್ಯಗಾರರು ಬಳಲುತ್ತಿರುವಂತೆ ಪ್ರಾಸ್ಟೇಟ್ ಗೆ ಸಂಬಂಧಿಸಿದ ಕೆಲವು ಕಾಯಿಲೆಗಳಿಂದ ದೂರುದಾರ ಮಹಿಳೆ ಬಳಲುತ್ತಿದ್ದಾರೆ ಎಂದು ಮಿಶ್ರಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.