ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನು ಉಗ್ರ ಸಂಘಟನೆಗಳು; ಪಿ.ಎಫ್.ಐ ಬ್ಯಾನ್ ಮಾಡಿದ ಹಾಗೆ ನಿಷೇಧಿಸಿ – ಮೌಲಾನಾ ತೌಖೀರ್ ರಜಾ ಖಾನ್

ಹೊಸದಿಲ್ಲಿ: ಬಲಪಂಥೀಯ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನು ಉಗ್ರ ಸಂಘಟನೆಗಳು ಎಂದು ಘೋಷಿಸಿ, ಅವುಗಳನ್ನು ಬ್ಯಾನ್ ಮಾಡಬೇಕು ಎಂದು ಇತ್ತಿಹಾದ್-ಎ-ಮಿಲಾತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಖೀರ್ ರಜಾ ಖಾನ್ ಆಗ್ರಹಿಸಿದ್ದಾರೆ.

ಹರ್ಯಾಣದ ಭಿವಾನಿಯಲ್ಲಿ ಇಬ್ಬರು ಮುಸ್ಲಿಂ ಯುವಕರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಈ ಹೇಳಿಕೆ ಬಂದಿದೆ. ಪಿಎಫ್ಐ ಬ್ಯಾನ್ ಮಾಡಿದ ರೀತಿಯಲ್ಲೇ ವಿಎಚ್ ಪಿ ಮತ್ತು ಬಜರಂಗದಳ ಬ್ಯಾನ್ ಮಾಡಿ ಎಂದು ಹೇಳಿದ್ದಾರೆ.

ಭಿವಾನಿ ಘಟನೆ ಫೆಬ್ರವರಿ 16 ರಂದು ನಡೆದಿದ್ದರೂ ನಾವು ಮೌನ ವಹಿಸಿದ್ದೇವೆ. ನಮ್ಮ ಮಕ್ಕಳ ಮೇಲೆ (ಜುನೈದ್ ಮತ್ತು ನಾಸಿರ್) ಸುಳ್ಳು ಆರೋಪಗಳನ್ನು ಹೊರಿಸಿ ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಬೆಂಬಲಿಸಿ ಸಭೆಗಳು ಮತ್ತು ಮಹಾಪಂಚಾಯತ್‌ಗಳು ನಡೆಯುವುದನ್ನು ನೋಡಿದಾಗ ನಮಗೆ ಕೊಲೆಗಳು ಮತ್ತು ಗುಂಪು ಹತ್ಯೆಗಳು ಭಾರತದಲ್ಲಿ ಸಾಮಾನ್ಯ ಎಂದು ಅನಿಸುತ್ತಿದೆ” ಎಂದು ಮೌಲಾನಾ ತೌಖೀರ್ ರಜಾ ಖಾನ್ ಹೇಳಿರುವುದುನ್ನು ಎಎನ್ಐ ಉಲ್ಲೇಖಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಹೇಗೆ ಬ್ಯಾನ್ ಮಾಡಿದರೋ ಹಾಗೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವನ್ನೂ ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದರು.

“ಭಿವಾನಿಯಲ್ಲಿ ನಡೆದ  ಘಟನೆಯಿಂದ ಹಿಂದೂ ಸಮುದಾಯಕ್ಕೂ ತಪ್ಪು ಸಂದೇಶವನ್ನು ರವಾನಿಸುತ್ತದೆ, ಈ ರೀತಿಯ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನೂ ಹೀರೋಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಅವರು ಭಾವಿಸಬಹುದು. ಆಡಳಿತವು ಇದನ್ನು ಗಮನಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ” ಎಂದು ಅವರು ಹೇಳಿದರು.

Latest Indian news

Popular Stories