ಬೆಂಗಳೂರು: ಪತಿ ತನ್ನ ಪತ್ನಿಯೊಂದಿಗಿನ ಬಲವಂತದ ಲೈಂಗಿಕತೆಗೆ ವಿನಾಯತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬುಧವಾರ ಭಿನ್ನ ನಿಲುವಿನ ತೀರ್ಪು ನೀಡಿದೆ.
ವೈವಾಹಿಕ ಅತ್ಯಾಚಾರ ಅಪರಾಧೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧೆರ್ ಮತ್ತು ಜಸ್ಟಿಸ್ ಹರಿ ಶಂಕರ್ ಅವರ ತೀರ್ಪಿನಲ್ಲಿ ಭಿನ್ನತೆಯಿದೆ. ವೈವಾಹಿಕ ಅತ್ಯಾಚಾರ ಕಾನೂನಿನಲ್ಲಿ ವಿನಾಯಿತಿಯು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ತಾನು ನಂಬಿದ್ದೇನೆ ಎಂದು ನ್ಯಾಯಮೂರ್ತಿ ಹರಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ರದ್ದುಗೊಳಿಸುವ ಬಗ್ಗೆ ಒಲವು ತೋರಿದ್ದಾರೆ.
ಸುದೀರ್ಘ ವಿಚಾರಣೆಯ ನಂತರ ಅತ್ಯಾಚಾರ ಕಾನೂನಿನಡಿಯಲ್ಲಿ ಗಂಡಂದಿರಿಗೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ತೀರ್ಪು ಕಾಯ್ದಿರಿಸಲಾಗಿತ್ತು. ಇಂದು ತೀರ್ಪು ಪ್ರಕಟಿಸಿದ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಕ್ಷಿದಾರರಿಗೆ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳ ತೀರ್ಪಿನಲ್ಲಿ ಭಿನ್ನತೆಯಿರುವುದರ ಕಾರಣ ವೈವಾಹಿಕ ಅತ್ಯಾಚಾರ ಸಂಬಂಧಿಸಿದ ಪ್ರಕರಣ ದೆಹಲಿ ಹೈಕೋರ್ಟಿನ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆಯಾಗಬಹುದು ಅಥವಾ ಸುಪ್ರೀಮ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.