ಶಕ್ತಿ ಯೋಜನೆ : ಖಾಸಗಿ ಬಸ್ ಬಿಟ್ಟು ಸರಕಾರಿ ಬಸ್’ನತ್ತ‌ ಮಹಿಳೆಯರು

ಮಂಗಳೂರು/ಉಡುಪಿ, ಜೂ.13: ಮಹಿಳೆಯರಿಗಾಗಿ ಶಕ್ತಿ ಉಚಿತ ಬಸ್ ಪ್ರಯಾಣ ಯೋಜನೆಗೆ ಭಾನುವಾರ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ಮಹಿಳಾ ಪ್ರಯಾಣಿಕರು ಮುಗಿಬಿದ್ದರು.

ನಗರದಿಂದ ಹೊರವಲಯಕ್ಕೆ ತೆರಳುವ NURM ಬಸ್‌ಗಳು ಬೆಳಗ್ಗೆ ಹಾಗೂ ಸಂಜೆ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಂದ ತುಂಬಿದ್ದವು.

ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ತೆರಳುವ ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಜೆ ಜ್ಯೋತಿ ಸಿನಿಮಾ ಥಿಯೇಟರ್‌ನಲ್ಲಿ ಅಂಬೆಡ್ಕರ್ ಸರ್ಕಲ್ ತಲುಪುವಷ್ಟರಲ್ಲಿ ಭರ್ತಿಯಾಗಿದ್ದವು.

ಉಡುಪಿಯಲ್ಲೂ ಮೂಡುಬಿದಿರೆ, ಕಾರ್ಕಳ, ಕುಂದಾಪುರ ಭಾಗದಲ್ಲಿ ಬಸ್‌ ಹತ್ತಲಾಗದೆ ಹಲವು ಮಹಿಳೆಯರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು. ಉಡುಪಿ ಡಿಪೋದಲ್ಲಿ ಭಾನುವಾರ ಮಧ್ಯಾಹ್ನದಿಂದ ರಾತ್ರಿ 10ರವರೆಗೆ 940 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರು.

ಸಾಮಾನ್ಯವಾಗಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದಾರೆ. ಮಂಗಳವಾರದಿಂದ ಹೆಚ್ಚಿನ ಪ್ರಯಾಣಿಕರು ಬರುವ ನಿರೀಕ್ಷೆಯಿದೆ. ಉಚಿತ ಯೋಜನೆಯಿಂದ ಖಾಸಗಿ ಬಸ್ ಗಳು ಭಾರೀ ನಷ್ಟ ಅನುಭವಿಸುತ್ತಿವೆ.

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭಾನುವಾರ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ ಒಟ್ಟು 5454 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ಟಿಕೆಟ್ ಮೌಲ್ಯ 190155. ಪುತ್ತೂರು ವಿಭಾಗದಲ್ಲಿ ಭಾನುವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ 6240 ಮಹಿಳೆಯರು ಉಚಿತ ಬಸ್ ಪ್ರಯಾಣದ ಪ್ರಯೋಜನ ಪಡೆದರು.

Latest Indian news

Popular Stories