ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದಲು ಸೂಚನೆ; ಸಚಿವ ಮಹದೇವಪ್ಪ

ಬೆಂಗಳೂರು: ಕರ್ನಾಟಕದಾದ್ಯಂತ ಶಾಲೆಗಳಲ್ಲಿ ಇನ್ನು ಸಂವಿಧಾನದ (Indian Constitution) ಪ್ರಸ್ತಾವನೆಯನ್ನು ಓದುವುದು ಹಾಗೂ ಅರ್ಥೈಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ಈ ವಿಚಾರವಾಗಿ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್​​ಸಿ ಮಹದೇವಪ್ಪ (HC Mahadevappa) ಮಾಹಿತಿ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಆ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆ ಓದಿದ್ದಲ್ಲದೆ, ನಂತರ ಶಾಲೆಗಳಲ್ಲಿ ಓದಿಸುವ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ.

‘ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಇಂದು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ‌ ಎಲ್ಲರೂ ಸಂವಿಧಾನ ತೋರಿದ ಮಾರ್ಗದಲ್ಲಿ ಕೆಲಸ ಮಾಡಲು ಸೂಚಿಸಿದರು. ಇದೇ ವೇಳೆ ರಾಜ್ಯದ ಎಲ್ಲಾ ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಂದ ಹೇಳಿಸುವುದಕ್ಕೆ ಪೂರಕವಾಗಿ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಿಂದ ಟ್ವೀಟ್ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ರಾಜ್ಯದ ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಓದಲು ಮತ್ತು ಅರ್ಥೈಸಲು ಆದೇಶಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.

Latest Indian news

Popular Stories