ಶಾಸಕ ಇ ತುಕರಾಮ್’ಗೆ ಅವಮಾನ ಆರೋಪ: ತಹಶೀಲ್ದಾರ್ ಪೋಸ್ಟಿಂಗ್ ಇಲ್ಲದೆ ವರ್ಗಾ

ಬೆಳಗಾವಿ: ಪಕ್ಷದ ಶಾಸಕ ಇ. ತುಕಾರಾಂ ಅವರನ್ನು ಅವಮಾನಿಸಿದ ಆರೋಪದ ಮೇರೆಗೆ ಬಳ್ಳಾರಿ ಜಿಲ್ಲೆ ಸಂಡೂರು ತಹಸೀಲ್ದಾರ್ ಅವರನ್ನು ಕೂಡಲೇ ಅಮಾನತುಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸದನವನ್ನು ಕೆಲ ಕಾಲ ಮುಂದೂಡಿದ್ದರು.

ಸರ್ಕಾರವು ಒತ್ತಡಕ್ಕೆ ಮಣಿದು ರಶ್ಮಿ ಅವರನ್ನು ಪ್ರಸ್ತುತ ಜವಾಬ್ದಾರಿಯಿಂದ ಮುಕ್ತಗೊಳಿಸಲು ನಿರ್ಧರಿಸಿದ ನಂತರ ಕಾಗೇರಿ ಸಭೆ ಕರೆದು ಪ್ರತಿಪಕ್ಷಗಳ ಮನವೊಲಿಸಿದ ಬಳಿಕವಷ್ಟೇ ಕಲಾಪಗಳು ಪುನರಾರಂಭಗೊಂಡವು. ಆಕೆಯ ವಿರುದ್ಧದ ಆರೋಪಗಳ ತನಿಖೆ ಪೂರ್ಣಗೊಳ್ಳುವವರೆಗೂ ಆಕೆಗೆ ಹೊಸ ಪೋಸ್ಟಿಂಗ್ ನೀಡದೆಯೇ ವರ್ಗಾವಣೆ ಮಾಡಲು ಸರ್ಕಾರ ಅಂತಿಮವಾಗಿ ನಿರ್ಧರಿಸಿತು.

ಇದಕ್ಕೂ ಮುನ್ನ ರಶ್ಮಿ ವಿರುದ್ಧ ಸದನದಲ್ಲಿ ಹಕ್ಕು ಚ್ಯುತಿ ನಿರ್ಣಯ ಮಂಡಿಸಿದ ಇ. ತುಕಾರಾಂ, ಸಂಡೂರಿನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಬಗ್ಗೆ ತನಗೆ ಆಕೆ ಮಾಹಿತಿ ನೀಡಿಲ್ಲ. ಏಕೆ ತಮ್ಮನ್ನು ಆಹ್ವಾನಿಸಲಿಲ್ಲ ಎಂದು ತಿಳಿಯಲು ಬಯಸಿದಾಗ ಅವಮಾನಿಸಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೆಂಬರ್ ನಲ್ಲಿಯೇ ತಹಸೀಲ್ದಾರ್ ವರ್ಗಾವಣೆಗೆ ಆದೇಶಿಸಲಾಗಿದೆ. ಆದರೆ, ವಿಧಾನಪರಿಷತ್ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅದು ಜಾರಿಯಾಗಿಲ್ಲ ಎಂದು ಹೇಳಿದರು. ಈ ವಿಷಯವನ್ನು ಹಕ್ಕುಬಾದ್ಯತಾ ಸಮಿತಿಗೆ ವರ್ಗಾಯಿಸಿ ಅದು ನೀಡುವ ಶಿಫಾರಸ್ಸಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾಗೇರಿ ಹೇಳಿದರು. ಆದಾಗ್ಯೂ, ಒಂದು ವೇಳೆ ಈ ವಿಷಯ ಹಕ್ಕು ಬಾದ್ಯತಾ ಸಮಿತಿಗೆ ವರ್ಗಾಯಿಸಿದ್ದಲ್ಲಿ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆಯುವುದಾಗಿ ಬೊಮ್ಮಾಯಿ ತಿಳಿಸಿದರು.

ಈ ಪ್ರತಿಕ್ರಿಯಿಯಿಂದ ತೃಪ್ತಗೊಳ್ಳದ ಕಾಂಗ್ರೆಸ್ ಶಾಸಕರು, ರಶ್ಮಿ ಅವರನ್ನು ಕೂಡಲೇ ಅಮಾನತುಪಡಿಸಬೇಕೆಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 10 ನಿಮಿಷ ಸದನ ಪುನರಾರಂಭಗೊಂಡ ಬಳಿಕ , ಆಕೆಯ ವಿರುದ್ಧ ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಪೋಸ್ಟ್ ನೀಡಿದೆ ಕೂಡಲೇ ವರ್ಗಾವಣೆ ಮಾಡಲು ನಿರ್ಧರಿಸಿರುವುದಾಗಿ ಕಂದಾಯ ಸಚಿವ ಆರ್. ಅಶೋಕ ಹೇಳಿದ ನಂತರ ಸದನ ಪುನರಾರಂಭಗೊಂಡಿತು.

Latest Indian news

Popular Stories

Social Media Auto Publish Powered By : XYZScripts.com
error: Content is protected !!