ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ಆದರೆ ಕೆಲವರು ವಿನಾಕಾರಣ ಜನರಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿ ಗೊಂದಲ ಸೃಜಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಪಾಲಿಕೆ ಸದಸ್ಯರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ನಗರ ಶಾಸಕರ ವಿರುದ್ಧ ನಗರಸಭೆ ಮಾಜಿ ಸದಸ್ಯ ರವಿಕಾಂತ ಬಗಲಿ ಮೊದಲಾದವರು ಪತ್ರಿಕಾಗೋಷ್ಠಿ ನಡೆಸಿ ಅನೇಕ ಆರೋಪಗಳನ್ನು ಹೊರೆಸಿದ ಬೆನ್ನಲ್ಲೇ ಬಿಜೆಪಿ ಪಾಲಿಕೆ ಸದಸ್ಯರು ಯತ್ನಾಳರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ..
ಬಿಜೆಪಿ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ಎಂ.ಎಸ್.ಕರಡಿ, ಕಿರಣ ಪಾಟೀಲ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಕುರಿಯುವರ, ಮುಖಂಡರಾದ ರಾಜೇಶ ದೇವಗಿರಿ, ರಾಜು ಜಾಧವ, ಚಂದ್ರು ಚೌಧರಿ ಮೊದಲಾದವರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಯತ್ನಾಳರ ವಿರುದ್ಧ ಮಾತನಾಡಿ ಕೆಲವರಿಗೆ ತಿರುಗೇಟು ನೀಡಿದರು.
ಮಾಜಿ ಉಪಮೇಯರ್ ರಾಜೇಶ ದೇವಗಿರಿ ಮಾತನಾಡಿ, ಬಸನಗೌಡರು ಒಳ್ಳೆಯ ವ್ಯಕ್ತಿ ಅವರಿಗೆ ವಿಜಯಪುರಕ್ಕೆ ಟಿಕೆಟ್ ನೀಡಿ, ಉಳಿದ ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರಕ್ಕೆ ಬಳಸಿಕೊಳ್ಳಬೇಕು ಎಂದರು.
ವಿಜಯಪುರದ ಅಭಿವೃದ್ಧಿ ದೃಷ್ಟಿಯಿಂದ ಯತ್ನಾಳರಿಗೇ ಟಿಕೆಟ್ ಕೊಡಬೇಕೆಂಬುದು ನಮ್ಮೆಲ್ಲರ ಆಗ್ರಹ. ಈ ಬಾರಿ ಯತ್ನಾಳರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸೋದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಯತ್ನಾಳರ ಅಭಿವೃದ್ಧಿ ಕಾರ್ಯದ ಬಗ್ಗೆ ನಗರದ ಜನತೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಯತ್ನಾಳರಿಗೆ ಟಿಕೆಟ್ ಕೊಡಬೇಕು ಎಂದು ಬಿಜೆಪಿ ಕಾರ್ಪೋರೇಟರ್ಗಳು ಒತ್ತಾಯಿಸಿದರು.
ಮನೆಯಲ್ಲಿ ಕುಳಿತವರಿಗೆ, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರಿಗೆ ಅವಕಾಶ ಕೊಡಬಾರದು. ಬಿಜೆಪಿಯಿಂದ 18 ಕಾರ್ಪೋರೇಟರ್ಗಳನ್ನು ಆರಿಸಿತಂದಿದ್ದು ಯತ್ನಾಳರ ಸಾಧನೆ ಎಂದರು.
ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಯತ್ನಾಳರ ವಿರುದ್ಧ ಸುದ್ದಿಗೋಷ್ಠಿ ನಡೆಸಿದವರು ಪಾಲಿಕೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ಯಾರದೋ ಕುಮ್ಮಕ್ಕಿನಿಂದ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಯತ್ನಾಳರ ಜನಪರ ಕಾಳಜಿಗೆ ಅವರು ಈ ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎಂದರು.
ಒಂದು ವೇಳೆ ಬೇರೆಯವರಿಗೆ ಟಿಕೆಟ್ ನೀಡಿದರೆ ನಿಮ್ಮ ನಿಲುವೇನು ಎಂದು ಕೇಳಿದಾಗ, ಬಸನಗೌಡರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷ ಬಿಟ್ಟು ನಾವಿಲ್ಲ ನಾವಷ್ಟೇ ಏಕೆ, ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಬಸನಗೌಡರೂ ಸ್ಪಷ್ಟಪಡಿಸಿದ್ದಾರೆ ಎಂದು ಪಾಲಿಕೆ ಸದಸ್ಯರು ಸ್ಪಷ್ಟಪಡಿಸಿದರು.