ವಿಜಯಪುರ: ನನಗೆ, ಸ್ವಾಮೀಜಿ, ಸರ್ಕಾರದ ಬಗ್ಗೆ ಒಬ್ಬರು ಹಗುರವಾಗಿ ಮಾತಾಡ್ತಿದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಕಿಡಿಕಾರಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿ ಇದ್ದು ಬದಲಾವಣೆ ಆಗಿಲ್ಲ. ರಾಜಕೀಯಕ್ಕೆ ಬರೋ ಮೊದಲು ನೀವೇನಿದ್ರಿ ಅರ್ಥ ಮಾಡಿಕೊಳ್ಳಿ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ, ಯಾವುದೇ ಸಮಾಜದೊಂದಿಗೆ ಭೇದಭಾವ ಇಲ್ಲದೆ ನಾವು ಅನ್ಯೋನ್ಯದಿಂದ ಇದ್ದೇವೆ. ಬರೋ ದಿನದಲ್ಲಿ ವಿಜಯಪುರ ಮತದಾರರು ಯತ್ನಾಳಗೆ ಪಾಠ ಕಲಿಸ್ತಾರೆ ಎಂದರು.
ನಿರಾಣಿ ಬಚ್ಚಾ ಎಂದು ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಚ್ಚಾ ಅನ್ನೋ ನೀವು ಅತೀ ಬುದ್ದಿವಂತ ಇದ್ದೀರಲ್ಲ, ನೀವು ನಮಗೆ ಗೈಡ್ ಮಾಡಬೇಕು.
ನಿರಾಣಿ, ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರಿಗೆ ಬದ್ಧತೆ ಇದೆ. ನಿರಾಣಿ ಜಗತ್ತಿನಲ್ಲೇ ನಂಬರ್ ಒನ್ ನಿರಾಣಿ ಗ್ರೂಪ್ ಆಫ್ ಕಂಪನಿ ಆಗಲಿದೆ. ನಿರಾಣಿ ಕಂಪನಿ ಸ್ವಂತ ಕಟ್ಟಿದ್ದೇನೆ, ಬೇರೆಯವರಂತೆ ನಾನು ಓಡಿ ಹೋಗಿಲ್ಲ ಎಂದರು.
ಹರಿಹರಕ್ಕೆ ಹೋಗಲಿ, ಸುಡಗಾಡಕ್ಕೆ ಹೋಗಲಿ ಎಂದು ಮಾತಾಡ್ತಿರಿ, ಯಾರಿಗೆ ಮಾತಾಡ್ತಿದಿರಿ, ಯಾವ ಪಕ್ಷದಲ್ಲಿದ್ದೀರಿ ಎಂಬುದನ್ನು ಯತ್ನಾಳ ತಿಳಿದುಕೊಳ್ಳಬೇಕು.
ನನಗೆ ನನ್ನ ಬಿಜೆಪಿ ಪಕ್ಷ ತಾಯಿ ಸಮಾನ, ನಿಮ್ಮ ಥರ ಒಂದು ಪಾರ್ಟಿಗೆ ಹೋದಾಗ ಒಂದರಂತೆ ಮಾತನಾಡಲ್ಲ ಎಂದರು.
ಅಲ್ಲದೇ, ನಿಂದು ತಾಕತ್ತ ಇದ್ರೆ ನಿನ್ನ ಎಲೆಕ್ಷನ್ ನಲ್ಲಿ ನೀನು ಮಾಡು, ನಾನು ನನ್ನ ಎಲೆಕ್ಷನ್ ಮಾಡ್ತೇನಿ ಎಂದು ಚಾಲೆಂಜ್ ಹಾಕಿದರು. ಹುಡುಗಾಟ ಹಚ್ಚೀರಿ? ನೀನು ಗೆದ್ದು ತೋರಿಸು, ವಿಜಯಪುರ ಜನ ನಿನಗೆ ೨೦೨೩ರಲ್ಲಿ ಪಾಠ ಕಲಿಸ್ತಾರೆ.
ಎರೆದುಕೊಳ್ಳುವರ (ಸ್ನಾನ ಮಾಡೋರ) ಕಳೆಗೆ ಕೂತು ಸ್ನಾನ ಮಾಡ್ತಿರಿ. ಯಾರದ್ದೋ ಕಿಚ್ಚಿನಲ್ಲಿ ಮೆಕ್ಕೆಜೋಳ ಸುಟಗೊಂಡು ತಿನ್ನೋರು ನೀವು. ಇಲ್ಲಿಯ ವರೆಗೆ ನಾವು ಸುಮ್ಮನಿದ್ದೀವಿ ಅಂದ್ರೆ ಹೆದರಿದಿವಿ ಅಂತಲ್ಲ. ನೀವು ಸುಧಾರಿಸ್ತೀರಿ ಅಂತ ಸುಮ್ಮನಿದ್ದೀವಿ, ನಾವು ಇದೇ ಜಿಲ್ಲೆಯವರು. ನಮಗೂ ನಿಮ್ಮಂತೆ ಮಾತನಾಡಲು ಬರುತ್ತದೆ. ಆದ್ರೆ, ಶ್ರೀ ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿದ್ದುಕೊಂಡು ನಾವು ಹಾಗೆ ಮಾಡಬಾರದು ಅಂತ ಸುಮ್ಮನಿದ್ದೀವಿ ಎಂದರು.