ವಿಜಯಪುರ: ಇಲ್ಲಿಯ ಅಲ್ ಅಮೀನ್ ಕ್ಯಾಂಪಸ್ ಸಮೀಪ ಇರುವ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲೆಯ 470 ಅಂಗವಿಕಲರಿಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಧೀನದ ಪಂಡಿತ ದೀನ ದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್ನ ದಕ್ಷಿಣ ಪ್ರಾದೇಶಿಕ ಕೇಂದ್ರದ ವತಿಯಿಂದ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು.
ಶಾಹೀನ್ ಕಾಲೇಜಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮೌಲ್ಯಮಾಪನ ಮಾಡಲಾದ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ಮಡಚುವ ಗಾಲಿ ಕುರ್ಚಿ, ಸಹಾಯಕ ಊರುಗೋಲು, ಮೊಣಕೈ ಊರುಗೋಲು, ಊರುಗೋಲು (ದೊಡ್ಡ ಬಗೆಯ), ಮಡಚುವ ವಾಕರ್, ರೊಲೇಟರ್ (ಬಿ), ಸಿ.ಪಿ. ಕುರ್ಚಿ, ಎಂ.ಆರ್. ಕಿಟ್, ಸ್ಮಾರ್ಟ್ ಕೇನ್ (ದೃಷ್ಟಿಹೀನ), ಎಡಿಎಲ್ ಕಿಟ್ ಹಾಗೂ ಕುಷ್ಠರೋಗ ಬಾಧಿತರಿಗೆ ಕೃತಕ ಅಂಗ ಮತ್ತು ಕ್ಯಾಲಿಪರ್ ಸೇರಿ 12 ಬಗೆಯ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕರಾದ ಅಬ್ದುಲ್ ಹಸೀಬ್ ಮಾತನಾಡಿ, ಅಂಗವಿಕಲರು ಸಾಧನ, ಸಲಕರಣೆಗಳ ಪ್ರಯೋಜನ ಪಡೆಯಬೇಕು. 2014 ರಿಂದ ಈವರೆಗೆ ಸರ್ಕಾರ ಒಂದು ಲಕ್ಷ ಅಂಗವಿಕಲರಿಗೆ ಉಚಿತ ಸಾಧನ, ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಇನ್ನು ಬೀದರ್ ಶಾಹೀನ್ ಕಾಲೇಜಿನಲ್ಲಿ 2022 ರಲ್ಲಿ ನಡೆದಿದ್ದ ಶಿಬಿರದ ಪ್ರಯೋಜನ 900 ಅಂಗವಿಕಲರು ಇದರ ಪ್ರಯೋಜನ ಪಡೆದಿದ್ದರು. ಈ ಬಾರಿ 470 ಜನ ಲಾಭ ಪಡೆದಿದ್ದಾರೆ. ಅಂಗವಿಕಲರಿಗೆ ಸಲಕರಣೆ ವಿತರಣೆ ಸೇರಿದಂತೆ ಸರ್ಕಾರದ ಜನ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕರಾದ ಅಬ್ದುಲ್ ಹಸೀಬ್ ಹೇಳಿದರು.
ಪಂಡಿತ ದೀನ ದಯಾಳ್ ಉಪಾಧ್ಯಾಯ ದೈಹಿಕ ಅಂಗವಿಕಲರ ಸಂಸ್ಥೆಯ ಸಿಕಂದರಾಬಾದ್ನ ದಕ್ಷಿಣ ಪ್ರಾದೇಶಿಕ ಕೇಂದ್ರದ ತಪಸ್ ಬೆಹರ್, ಶಾಹೀನ್ ಕಾಲೇಜು ವಿಜಯಪುರದ ನಿರ್ದೇಶಕರಾದ ಶಹನೂರ್ ಸಂಬ್ರೇಕರ್ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಜಶೇಖರ್ ದೈವಾಡಿ, ಅಲ್-ಅಮೀನ್ ಮೆಡಿಕಲ್ ಕಾಲೇಜ ಟ್ರಸ್ಟಿ ರಿಯಾಜ್ ಫಾರೂಕಿ, ಅಲ್-ಅಮೀನ್ ಕಾಲೇಜ ಸುಪ್ರಿಂಟೆಂಡೆಂಟ್ ಡಾ. ಜಿಲಾನಿ ಅವಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.