ಶಿವಪುರ ಗ್ರಾಮದಲ್ಲಿ ಸುನೀಲ್ ಕುಮಾರ್ ಬೇನಾಮಿ ಆಸ್ತಿ ಖರೀದಿ ಆರೋಪ: ಪ್ರಮೋದ್ ಮುತಾಲಿಕ್ ಲೋಕಾಯುಕ್ತಗೆ ದೂರು

ಉಡುಪಿ, ಮಾ.2: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೇನಾಮಿ ಆಸ್ತಿ ಖರೀದಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದು ಉಡುಪಿ ಲೋಕಾಯುಕ್ತ ಉಡುಪಿ ವಿಭಾಗ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ಅವರಿಗೆ ದೂರು ಸಲ್ಲಿಸಿದರು.


ಶಿವಪುರ ಗ್ರಾಮದಲ್ಲಿ ಗಜಾನನ ಮತ್ತು ವಿದ್ಯಾ ಸುವರ್ಣ ಎಂಬವರ ಹೆಸರಿನಲ್ಲಿ 67.94 ಎಕರೆ ಜಾಗವನ್ನು 4.15ಕೋಟಿ ರೂ.ಗೆ ಖರೀದಿ ಮಾಡಿದ್ದು, ಇವರಿಗೆ ಯಾವುದೇ ಆದಾಯದ ಮೂಲ ಇಲ್ಲ. ಇವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದು, ಇದರ ಹಿಂದೆ ಪ್ರಭಾವಿ ಸಚಿವರ ಕೈವಾಡದ ಶಂಕೆ ಇದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.


ವ್ಯವಸ್ಥಿತವಾಗಿ 53 ರೈತರಿಗೆ ಮೋಸ ಮಾಡಿ ಬಲತ್ಕಾರವಾಗಿ ಕಡಿಮೆ ಬೆಲೆಯಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಈಗ ಅದೇ ಜಾಗವನ್ನು ಕೈಗಾರಿಕ ವಲಯ ಎಂಬುದಾಗಿ ಘೋಷಣೆ ಮಾಡಿ ನಾಲ್ಕೈದು ಪಟ್ಟು ಹೆಚ್ಚು ಹಣಕ್ಕೆ ಸರಕಾರಕ್ಕೆ ಮಾರಾಟ ಮಾಡಿ ಹಣ ಪಡೆಯುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮತ್ತು ಇವತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಈ ಕುರಿತು ವಾರದೊಳಗೆ ಸಂಪೂರ್ಣ ತನಿಖೆಯಾಗ ಬೇಕು ಎಂದು ಒತ್ತಾಯಿಸಿದರು.

Latest Indian news

Popular Stories